ಮಂಗಳೂರು : ಫ್ಯಾಷನ್ ಶೋ ಎಂಬುದು ಮಾಡೆಲಿಂಗ್ ಮೇಲೆ ಆಸಕ್ತಿ ಇರುವವರು ಮಾಡುವ ಚಟುವಟಿಕೆ. ಅದರಲ್ಲೂ ಫ್ಯಾಷನ್ ಜಗತ್ತು ಅಂದ್ರೆ ಸಾಕು ನಮ್ಮ ಹೆಣ್ಣು ಮಕ್ಕಳು ಒಂದು ಕೈ ಮುಂದಿರ್ತಾರೆ. ಇದೀಗ ಮೊದಲ ಬಾರಿಗೆ ವೈದ್ಯ ವೃತ್ತಿಯಲ್ಲಿರುವವರಿಗೆ ವಸ್ತ್ರ ವಿನ್ಯಾಸ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಅಯೋಜಿಸಲಾಗಿದೆ.
ದಿನವಿಡೀ ವೈದ್ಯರುಗಳು ರೋಗಿಗಳ ಚಿಕಿತ್ಸೆಯ ಮೇಲೆ ಗಮನ ಕೇಂದ್ರೀಕರಿಸಿರುತ್ತಾರೆ. ರೋಗಿಗಳನ್ನು ಬಿಟ್ಟರೆ ತಮ್ಮ ಕುಟುಂಬದ ಕಡೆ ಗಮನ ಕೊಡುತ್ತಾರೆ. ಉಳಿದಂತಹ ಚಟುವಟಿಕೆಗಳಿಂದ ವೈದ್ಯರುಗಳು ದೂರ. ಅದರಲ್ಲಿಯೂ ಥಳಕು ಬಳುಕಿನ ಫ್ಯಾಷನ್ ಶೋ ಕಾರ್ಯಕ್ರಮಗಳಿಂದ ಬಹುದೂರ ಇರುತ್ತಾರೆ. ಇದರ ನಡುವೆಯೇ ಮಂಗಳೂರಿನಲ್ಲಿ ರಾಜ್ಯದಲ್ಲಿಯೇ ಹೊಸ ಪ್ರಯೋಗವೊಂದನ್ನು ಮಹಿಳಾ ವೈದ್ಯರು ಮಾಡಲು ಹೊರಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ವೈದ್ಯರಿಗಾಗಿ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ.
ಹೌದು, ಮಂಗಳೂರಿನ ಪಾತ್ ವೇ ಎಂಟರ್ ಪ್ರೈಸಸ್ ಹಾಗೂ ವಿಮೆನ್ ಡಾಕ್ಟರ್ ವಿಂಗ್ ಇದರ ಸಹಯೋಗದಲ್ಲಿ ಮೆಡಿಕ್ವೆಸ್ಟ್ ಹೆಲ್ತ್ ಕೇರ್ ಪ್ರಾಯೋಜಕತ್ವದಲ್ಲಿ ಡಾಕ್ಟರ್ ಫ್ಯಾಷನ್ ರ‍್ಯಾಂಪ್ 2023 ನ್ನು ಆಯೋಜಿಸಲಾಗಿದೆ. ಅಕ್ಟೋಬರ್ 15 ರಂದು ನಗರದ ಮಿಲಾಗ್ರಿಸ್ ಸಮೀಪದ ಐಎಂಎ ಹಾಲ್ನಲ್ಲಿ ಸಂಜೆ 4 ಗಂಟೆಯಿಂದ 8 ಗಂಟೆಯವರೆಗೆ ಮಹಿಳಾ ವೈದ್ಯರಿಗಾಗಿ ಫ್ಯಾಷನ್ ಶೋ ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಪಾತ್ ವೇ ಎಂಟರ್ ಪ್ರೈಸಸ್ನ ಮುಖ್ಯಸ್ಥ ದೀಪಕ್ ಗಂಗೂಲಿ ಅವರು, ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮಹಿಳಾ ವೈದ್ಯರಿಗಾಗಿ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು 21 ಮಹಿಳಾ ವೈದ್ಯರು ನೋಂದಣಿ ಮಾಡಿದ್ದಾರೆ. ಅಂದು ಸಂಜೆ 4 ಗಂಟೆಗೆ ವಿವಿಧ ರೌಂಡ್ಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಫೈನಲ್ನಲ್ಲಿ ಆಯ್ಕೆಯಾದವರಿಗೆ ಕಿರೀಟ ತೊಡಿಸಲಾಗುತ್ತದೆ. ವೈದ್ಯರುಗಳು ಈ ಬಗ್ಗೆ ಅತ್ಯುತ್ಸಾಹದಲ್ಲಿದ್ದಾರೆ ಎಂದರು.
ಮಹಿಳಾ ಡಾಕ್ಟರ್ ವಿಂಗ್ ಅಧ್ಯಕ್ಷೆ ಡಾ. ಜೆಸ್ಸಿ ಮಾತನಾಡಿ, "ನಾನು ಇತ್ತೀಚೆಗೆ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸಿ ಕಿರೀಟ ಮುಡಿಗೇರಿಸಿದ್ದೇನೆ. ಮಹಿಳಾ ವೈದ್ಯರುಗಳು ದಿನಪೂರ್ತಿ ಒತ್ತಡದಲ್ಲಿರುತ್ತಾರೆ. ಒಂದೆಡೆ ಮನೆ ನಿಭಾಯಿಸುವುದು ಮತ್ತೊಂದೆಡೆ ರೋಗಿಗಳ ಚಿಕಿತ್ಸೆ ಬಗ್ಗೆ ಗಮನಕೊಡುವುದು ಮಾಡುತ್ತಿರುತ್ತಾರೆ. ಅವರ ಒತ್ತಡವನ್ನು ಕಡಿಮೆ ಮಾಡಲು ಇಂತಹ ಒಂದು ಪ್ರಯತ್ನ ಮಾಡಲಾಗಿದೆ. ಈ ಫ್ಯಾಷನ್ ಶೋನಲ್ಲಿ ಮಹಿಳಾ ವೈದ್ಯರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಒಂದಿಬ್ಬರು ಬಿಟ್ಟರೆ ಇದರಲ್ಲಿ ಹೆಚ್ಚಿನವರು ಹೊಸಬರು. ಕಾರ್ಯಕ್ರಮದಲ್ಲಿ ವೈದ್ಯ ಕುಟುಂಬದವರು ಸಹ ಪಾಲ್ಗೊಳ್ಳಲಿದ್ದಾರೆ" ಎಂದರು.
ಮಂಗಳೂರಿನ ಪಾತ್ ವೇ ಎಂಟರ್ ಪ್ರೈಸಸ್ ಹಲವು ಫ್ಯಾಷನ್ ಶೋ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನೇಕ ಮಾಡೆಲ್ಗಳನ್ನು ರಾಷ್ಟ್ರ ಮಟ್ಟಕ್ಕೆ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿ ಕಿರೀಟ ಗೆಲ್ಲುವ ಕಾರ್ಯ ಮಾಡಿದೆ. ಫ್ಯಾಷನ್ ಶೋ ಮಾತ್ರವಲ್ಲದೇ, ವನಿತಾ ಕ್ರಿಕೆಟ್, ರಾಷ್ಟ್ರಮಟ್ಟದ ಲಗೋರಿ ಸೇರಿದಂತೆ ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸಿದೆ. ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಹಿಳಾ ವೈದ್ಯರ ಫ್ಯಾಷನ್ ಶೋ ಮಾಡುವ ಕಾರ್ಯಕ್ಕೆ ಮುಂದಾಗಿದೆ.
ಇದನ್ನೂ ಓದಿ : ಫ್ಯಾಷನ್ ಶೋನಲ್ಲಿ ತೃತೀಯ ಲಿಂಗಿಗಳ ರ‍್ಯಾಂಪ್ ವಾಕ್ - ವಿಡಿಯೋ