ಮಂಗಳೂರು: ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೋರ್ವರು ಅಂಗಾಂಗ ದಾನ ಮಾಡುವ ಮೂಲಕ ಆರು ಮಂದಿಗೆ ಪುನರ್ಜನ್ಮ ನೀಡಿ, ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಈಕೆಯ ಅಂಗಾಂಗವನ್ನು ಗ್ರೀನ್ ಕಾರಿಡಾರ್ ಮೂಲಕ ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಅಲ್ಲಿಂದ ಚೆನ್ನೈನ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಶನಿವಾರ ದಾವಣಗೆರೆಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಇಂದ್ರಮ್ಮ ಬಿ.ಎಂ (57) ಎಂಬುವರು ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ವಿಶೇಷ ಚಿಕಿತ್ಸೆಯ ಹೊರತಾಗಿಯೂ ಬದುಕುಳಿಯುವ ಸಾಧ್ಯತೆ ಕಡಿಮೆ ಇತ್ತು. ಆಕೆಯ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದರು. ಈ ಹಿನ್ನೆಲೆ ಕುಟುಂಬಸ್ಥರು ಆಕೆಯ ಅಂಗಾಂಗವನ್ನು ಆರು ಮಂದಿಗೆ ನೀಡಿ ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇದನ್ನೂ ಓದಿ: ದಾವಣಗೆರೆಯ ವೃದ್ಧ ದಂಪತಿ ಬರ್ಬರ ಕೊಲೆ ಕೇಸ್.. ಮೊಮ್ಮಗನ ಸುತ್ತ ಸುತ್ತಿದ ಪೊಲೀಸ್ ಶ್ವಾನ..!
1994ರ ಮಾನವ ಹಕ್ಕುಗಳ ಕಾಯ್ದೆಯ 1994 ಸಂಹಿತೆ ಹಾಗೂ ಕಾರ್ಯವಿಧಾನಗಳ ಪ್ರಕಾರ, ಇಂದ್ರಮ್ಮ ಅವರ ಹೃದಯ/ಹೃದಯ ಕವಾಟಗಳು, ಯಕೃತ್ತು, ಎರಡು ಮೂತ್ರಪಿಂಡಗಳು ಮತ್ತು ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆಗಳನ್ನು ತೆಗೆಯಲು ನಿರ್ಧರಿಸಲಾಗಿದೆ. ಇದರಿಂದ ಒಟ್ಟು ಆರು ಮಂದಿಯ ಜೀವ ಉಳಿಸಲು ಸಹಾಯವಾಗಿದೆ. ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಮಣಿಪಾಲ ಕಸ್ತೂರಬಾ ಆಸ್ಪತ್ರೆಯ ರೋಗಿಗಳಿಗೆ ಬಳಸಲಾಯಿತು. ಒಂದು ಮೂತ್ರಪಿಂಡವನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ, ಹೃದಯ/ಹೃದಯ ಕವಾಟವನ್ನು ಚೆನ್ನೈನ ಎಂ.ಜಿ.ಎಂ ಆಸ್ಪತ್ರೆಯ ರೋಗಿಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ಪೊಲೀಸರ ಇಲಾಖೆಯ ಸಹಯೋಗದೊಂದಿಗೆ ದಾನ ಮಾಡಿದ ಅಂಗಗಳನ್ನು ಹಸಿರು ಪಥದಲ್ಲಿ (ಗ್ರೀನ್ ಕಾರಿಡಾರ್) ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಅಲ್ಲಿಂದ ಚೆನ್ನೈಗೆ ರವಾನಿಸಲಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ