ಮಂಗಳೂರು: ವ್ಯಕ್ತಿಯೋರ್ವ ಹೆಂಡತಿಯನ್ನು ತಾನೇ ಕೊಲೆಗೈದು, ಬಳಿಕ ಆಕೆ ಮೆಟ್ಟಿಲಿನಿಂದ ಜಾರಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಕಥೆ ಕಟ್ಟಿ ಆಸ್ಪತ್ರೆಗೆ ಸೇರಿಸಿದ ಪ್ರಕರಣ ಜಿಲ್ಲೆಯ ಮೂಡಬಿದ್ರೆಯ ಧರೆಗುಡ್ಡೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಧರೆಗುಡ್ಡೆಯ ದಿನರಾಜ್ ಎಂಬಾತನೆ ತನ್ನ ಹೆಂಡತಿಯನ್ನು ಕೊಲೆ ಮಾಡಿದವ. ಈತ ತನ್ನ ಹೆಂಡತಿ ಸುನಿತಾಳನ್ನು ನಿನ್ನೆ ಮೂಡಬಿದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತನ್ನ ಹೆಂಡತಿ ಮನೆಯ ಮೆಟ್ಟಲಿನಿಂದ ಜಾರಿ ಬಿದ್ದು ಗಾಯಗೊಂಡಿದ್ದಾಳೆ ಎಂದು ಹೇಳಿದ್ದ. ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಖಾಸಗಿ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಸುನಿತಾ ಸಾವನ್ನಪ್ಪಿದ್ದು, ಮೃತದೇಹವನ್ನು ಮಂಗಳೂರಿನ ಜಿಲ್ಲಾಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಪತಿಯಿಂದಲೇ ಕೊಲೆ:
ಸುನಿತಾ ಮನೆಯವರು ಆಕೆಯ ಸಾವಿನ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪತಿ ದಿನರಾಜ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಾರೆಯಿಂದ ಆಕೆಗೆ ಹೊಡೆದು, ಬಳಿಕ ಸುಳ್ಳು ಹೇಳಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದು ತಿಳಿದುಬಂದಿದೆ. ಆತನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮನಸ್ತಾಪವೇ ಕೊಲೆಗೆ ಕಾರಣ?
ದಿನರಾಜ್ ಮತ್ತು ಸುನಿತಾ ಮದುವೆಯಾಗಿ ಒಂದೂವರೆ ವರ್ಷವಾಗಿದ್ದು ಇಬ್ಬರ ನಡುವೆ ಮನಸ್ತಾಪಗಳಿಂದ ಕಿರಿಕಿರಿಯಾಗುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಯಾವ ವಿಚಾರದಲ್ಲಿ ಇವರಿಗೆ ಮನಸ್ತಾಪವಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ಮತ್ತು ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಲಾಗಿದೆ. ಮಂಗಳೂರಿನ ವೆನ್ ಲಾಕ್ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ತೆರಳಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ಕೊಲಿಜಿಯಂನಿಂದ 9 ನ್ಯಾಯಾಧೀಶರಿಗೆ ಬಡ್ತಿ: 2027ಕ್ಕೆ ರಾಜ್ಯದ ನ್ಯಾ.ಬಿ.ವಿ ನಾಗರತ್ನ ಸಿಜೆಐ?