ಮಂಗಳೂರು(ದಕ್ಷಣ ಕನ್ನಡ): ಕೋವಿಡ್ ಲಾಕ್ ಡೌನ್ ಹಲವು ಜನರ ಬಾಳನ್ನು ಹಾಳು ಮಾಡಿದೆ. ಲಾಕ್ ಡೌನ್ನಲ್ಲಿ ಕೆಲಸವಿಲ್ಲದೆ ಮಾನಸಿಕ ಅಸ್ವಸ್ಥತನಾಗಿ ಮಂಗಳೂರಿನ ಬೀದಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಗೆ ವೈಟ್ ಡೌವ್ಸ್ ಸಂಸ್ಥೆ ಚಿಕಿತ್ಸೆ ನೀಡಿ ಮತ್ತೆ ಕುಟುಂಬಕ್ಕೆ ಸೇರಿಸಿದೆ.
ಸಂಸ್ಥೆಯ ಕೊರಿನ್ ರಸ್ಕಿನ್ ಕೋವಿಡ್ ಲಾಕ್ ಡೌನ್ ವೇಳೆ ನಿರಾಶ್ರಿತರಿಗೆ ಆಹಾರ ನೀಡುವಾಗ ಮಾನಸಿಕ ಅಸ್ವಸ್ಥನ ರೀತಿಯಲ್ಲಿ ಕಂಡ ವ್ಯಕ್ತಿಯನ್ನು ಕರೆದುಕೊಂಡು ಬರುತ್ತಾರೆ. ಆತ ಯಾರು, ಎಲ್ಲಿಯವನು ಎಂಬುದು ಗೊತ್ತಿರಲಿಲ್ಲ. ಇತ್ತೀಚಿಗೆ ಸಂಸ್ಥೆಯು ಚಿಕಿತ್ಸೆ ಗೊಳಪಟ್ಟು ಮತ್ತೆ ಮನೆ ಸೇರಿದ ವ್ಯಕ್ತಿಗಳ ಡಾಕ್ಯುಮೆಂಟರಿಯನ್ನು ತೋರಿಸುತ್ತಿದ್ದಾಗ ಈತ ತಾನು ಮನೆಗೆ ಹೋಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ.
ಆತ ತನ್ನ ಊರು ಮೈಸೂರಿನ ಉದಯಗಿರಿಯ ರಾಜೀವ್ ನಗರದ ನಿವಾಸಿ ಎಂದು ಹೇಳಿದ್ದಾನೆ. ಪೊಲೀಸರ ಸಹಕಾರದೊಂದಿಗೆ ಆತನ ಮನೆಯವರನ್ನು ಪತ್ತೆ ಹಚ್ಚಿದ ವೈಟ್ ಡೌವ್ಸ್ ಸಂಸ್ಥೆ ಆತನನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ. ಈತ ರವಿಕುಮಾರ್ ಎಂಬ ಹೆಸರಿನವನಾಗಿದ್ದು, ಹೊಸದುರ್ಗದಲ್ಲಿ ಗಾರೆ ಕೆಲಸ ಮಾಡುತ್ತಿದ್ದನು.
ಪತ್ನಿ ಮತ್ತು ಪುತ್ರಿ ಜೊತೆ ಜೀವನ ಸಾಗಿಸುತ್ತಿದ್ದ ಇವರಿಗೆ ಲಾಕ್ ಡೌನ್ ಕೆಲಸ ಸಿಗದೆ ಊರೂರು ಅಲೆದಾಡಿ ಕೊನೆಗೆ ಗುಜರಾತ್ಗೆ ಹೋಗಿದ್ದನು. ಆದರೆ ಅಲ್ಲಿಯೂ ಕೆಲಸ ಸಿಗದೆ ಮಾನಸಿಕವಾಗಿ ಜರ್ಜರಿತನಾಗಿ ಮತ್ತೆ ಮನೆ ಸೇರಿದ್ದ. ಇದರ ಬೆನ್ನಿಗೆ ಎರಡನೇ ಲಾಕ್ ಡೌನ್ ಬಂದು ಮತ್ತೆ ಮಾನಸಿಕವಾಗಿ ಕುಗ್ಗಿದ ಈತ ಮನೆ ಬಿಟ್ಟು ಮಂಗಳೂರು ತಲುಪಿದ್ದ. ಮಂಗಳೂರಿನ ಬೀದಿ ಬೀದಿ ತಿರುಗುತ್ತಿದ್ದ ಈತನನ್ನು ವೈಟ್ ಡೌವ್ಸ್ ಸಂಸ್ಥೆ ಕೆರೆದುಕೊಂಡು ಹೋಗಿ ಚಿಕಿತ್ಸೆನೀಡಿ ಗುಣಪಡಿಸಿದೆ.
ಸಂಸ್ಥೆ ಪೊಲೀಸರ ಸಹಾಯದಿಂದ ರವಿಕುಮಾರ್ ಅವರ ಪತ್ನಿ ಮತ್ತು ಪುತ್ರಿಯನ್ನು ಕರೆಸಿ ಅವರಿಗೆ ಹಸ್ತಾಂತರಿಸಿದರು. ಕೊರಿನ್ ರಸ್ಕಿನ್ ಅವರು ತಮ್ಮ ವೈಟ್ ಡೌವ್ಸ್ ಸಂಸ್ಥೆ ಮೂಲಕ ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಚಿಕಿತ್ಸೆ ನೀಡಿ ಸರಿಪಡಿಸಿದ್ದಾರೆ. ಈ ವ್ಯಕ್ತಿ ಸೇರಿದಂತೆ ಈಗಾಗಲೇ 396 ಮಂದಿಯನ್ನು ಮತ್ತೆ ಕುಟುಂಬದ ಜೊತೆಗೆ ಸೇರಿಸಿದ್ದಾರೆ. ಈ ಸಂಸ್ಥೆಯಲ್ಲಿ ಇದೀಗ 142 ಮಂದಿ ಆಶ್ರಯ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್: ಕಂಚು ಗೆದ್ದ ಕೋಲಾರದ ಕೀರ್ತನಾ ಪಂಡಿಯನ್