ಬಂಟ್ವಾಳ: ಮದುವೆ ಕರೆಯೋಲೆ ವಿಭಿನ್ನ ಮತ್ತು ವಿಶೇಷವಾಗಿರಲಿ ಎಂದು ಕೆಲವರು ಬಯಸುತ್ತಾರೆ. ಆದರೆ ಇಲ್ಲಿ ಪೋಷಕರು ತಮ್ಮ ಮಗಳ ಮದುವೆಯ ಆಮಂತ್ರಣದಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿ ಗಮನ ಸೆಳೆದಿದ್ದಾರೆ.
ಬಂಟ್ವಾಳ ತಾಲೂಕಿನ ಎಸ್.ವಿ.ಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಎಂಬವರು ಬೆಂಡೆ, ಅರಿವೆ, ಅಲಸಂಡೆಯಂತಹ ತರಕಾರಿ ಬೀಜಗಳ ಪ್ಯಾಕೆಟ್ ಅನ್ನು ಆಮಂತ್ರಣದೊಳಗೆ ಪಿನ್ ಮಾಡಿ ಹಸಿರೆಲೆಯಂತೆಯೇ ಕಾಣಿಸುವ ಮದುವೆ ಆಮಂತ್ರಣವನ್ನು ತನ್ನ ಸ್ನೇಹಿತರು, ಬಂಧು ಮಿತ್ರರಿಗೆ ನೀಡುತ್ತಿದ್ದಾರೆ.
ಪ್ಲಾಸ್ಟಿಕ್ ಬಳಕೆ ವಿರುದ್ಧ ರಾಜಮಣಿ ರಾಮಕುಂಜ ಅವರದ್ದು ಎರಡು ದಶಕ ದಾಟಿದ ಹೋರಾಟ. ಅವರ ಮದುವೆಯಲ್ಲಿಯೂ ಪರಿಸರ ಜಾಗೃತಿ ಸಂದೇಶ ನೀಡಿದ್ದರಂತೆ. ಪುತ್ರಿ ಮೇಧಾ ಕೂಡಾ ಪರಿಸರ ಜಾಗೃತಿಗೆ ಕೈ ಜೋಡಿಸುತ್ತಿದ್ದಾರಂತೆ. ರಾಜಮಣಿ ಅವರ ಪತ್ನಿ ಭಾರತಿ ಸಹೋದರ ದಿನೇಶ್ ಹೊಳ್ಳ ಪರಿಸರವಾದಿ. ಹೀಗೆ ಈ ಕುಟುಂಬ ಮದುವೆಯ ಸಂಭ್ರಮದಲ್ಲೂ ಪರಿಸರ ನಾಶದ ಸೂಕ್ಷ್ಮತೆಯನ್ನು ಬಂಧುಮಿತ್ರರಿಗೆ ತಿಳಿಸುವುದರ ಜೊತೆಗೆ ಕಾಳಜಿಯನ್ನು ತೋರಿಸಲು ಆಹ್ವಾನ ಪತ್ರಿಕೆಯಲ್ಲೇ ಸಂದೇಶ ನೀಡಿದೆ.
ಬಂಟ್ವಾಳ ತಾಲೂಕಿನ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಡಿ.14ರಂದು ಪತ್ರಕರ್ತೆ ಮೇಧಾ ಮತ್ತು ರಂಜನ್ ಆಚಾರ್ಯ ಮದುವೆ ನಿಗದಿಯಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳು ನವದಂಪತಿಗೆ ಬಟ್ಟೆಚೀಲ, ಪುಸ್ತಕಗಳ ಉಡುಗೊರೆ ನೀಡಬಹುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ರಾಜಮಣಿ ರಾಮಕುಂಜ, ಪರಿಸರದ ಸಂರಕ್ಷಣೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂಬ ಹಿನ್ನೆಲೆಯಲ್ಲಿ ಪ್ರಯತ್ನ ಮಾಡಿದ್ದೇನೆ. ನನ್ನ ಮದುವೆ ಕಾಗದದಲ್ಲಿ ನೀರಿನ ಮಿತ ಬಳಕೆಯನ್ನು ಮಾಡುವಂತೆ ಮನವಿ ಪತ್ರ ನೀಡಲಾಗಿತ್ತು. ನೆಲ-ಜಲ ಸಂರಕ್ಷಣೆ ಬಗ್ಗೆ ಬರಹವನ್ನು ಮನೆ ಗೃಹಪ್ರವೇಶ ಸಂದರ್ಭ ಮಾಡಲಾಗಿತ್ತು ಎಂದರು.
ಇದನ್ನೂ ಓದಿ: ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, NET ಪಾಸ್, ಈಗ ಪ್ರೊಫೆಸರ್: ಬದುಕಿಗೆ ಆಸರೆಯಾದ ಗೋಲ್‌ಗೊಪ್ಪ!