ಮಂಗಳೂರು: ನಮ್ಮ ದಿನನಿತ್ಯದ ತ್ಯಾಜ್ಯಗಳನ್ನು ನಾವೇ ವಿಲೇವಾರಿ ಮಾಡುವಂತಹ ವ್ಯವಸ್ಥೆ ಇದ್ದರೆ ದೊಡ್ಡ ಪ್ರಮಾಣದ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಕಡಿವಾಣ ಹಾಕಬಹುದು. ಆದ್ದರಿಂದ ನಗರದ ಎಲ್ಲಾ ಅಪಾರ್ಟ್ಮೆಂಟ್ಗಳಲ್ಲೂ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕೆಂದು ಮನಪಾ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಅಪಾರ್ಟ್ಮೆಂಟ್ಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಈಗಾಗಲೇ ಆರಂಭಿಸಲಾಗಿದೆ.
'ಮೈ ಗ್ರೀನ್ ಬಿನ್' ಎಂಬ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಪಾರ್ಟ್ ಮೆಂಟ್ ಗೆ ತಂದು ಅಳವಡಿಸಿ, ಬಹಳ ಸುಲಭವಾಗಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಬಹುದು. ಒಂದು ಜೊತೆ ಮೈ ಗ್ರೀನ್ ಬಿನ್‌ಗೆ 2000 ರೂ. ನಿಂದ 2 ಲಕ್ಷ ರೂ.ವರೆಗೂ ಹಣವಿರುತ್ತದೆ. ಪ್ರತಿನಿತ್ಯ ನಮ್ಮಲ್ಲಿ ಉತ್ಪಾದನೆಯಾಗುವ ಯಾವುದೇ ಹಸಿ ಕಸವನ್ನು ಮೈ ಗ್ರೀನ್ ಬಿನ್ ಗೆ ಹಾಕಿ ಮೈಕ್ರೋಪ್ಸ್ ಗಳನ್ನು ಸುರಿಯಬೇಕು ಎನ್ನುತ್ತಾರೆ ಮೈ ಗ್ರೀನ್ ಬಿನ್ ತ್ಯಾಜ್ಯ ಘಟಕ ಸರಬರಾಜುದಾರ ಜೀತ್ ಮಿಲನ್ ರೋಚ್.
ಒಂದು ಬಿನ್ 30-35 ದಿನಗಳಲ್ಲಿ ಭರ್ತಿಯಾಗುತ್ತದೆ. ಅದನ್ನು ಪ್ರತ್ಯೇಕವಾಗಿ ಇರಿಸಿ ಮತ್ತೊಂದು ಬಿನ್ನಲ್ಲಿ ತ್ಯಾಜ್ಯವನ್ನು ಹಾಕಬೇಕು. ಮೊದಲ ಮೈ ಗ್ರೀನ್ ಬಿನ್ 15 ದಿನಗಳಲ್ಲಿ ಗೊಬ್ಬರವಾಗಿ 15 ದಿನಗಳಲ್ಲೇ ಸಿದ್ಧವಾಗುತ್ತದೆ. ಬಿನ್ ಒಳಗಿನ ನೀರನ್ನೂ ಹೊರ ಸುರಿಸಲು ಪೈಪ್ ಅಳವಡಿಸಲಾಗಿದೆ. ಈ ನೀರು ಹಾಗೂ ಗೊಬ್ಬರ ಗಿಡಗಳಿಗೆ ಉತ್ತಮ ಗೊಬ್ಬರವಾಗಿ ಬಳಕೆಯಾಗುತ್ತದೆ ಎಂದು ಸ್ಥಳೀಯ ನಿವಾಸಿ ಡಾ.ರವಿ ತಮ್ಮ ಅಭಿಪ್ರಾಯವನ್ನು ಈಟಿವಿ ಭಾರತನೊಂದಿಗೆ ಹಂಚಿಕೊಂಡರು.
ತ್ಯಾಜ್ಯ ಸೃಷ್ಟಿಯಾಗುವುದನ್ನು ಕಡಿಮೆಗೊಳಿಸಲು ಎಲ್ಲಾ ಅಪಾರ್ಟ್ಮೆಂಟ್ಗಳಲ್ಲಿಯೂ ಈ ಮೈ ಗ್ರೀನ್ ಬಿನ್ ಅಳವಡಿಸಲು ಮಂಗಳೂರು ಮನಪಾ ಆದೇಶಿಸಿದೆ. ಅಲ್ಲದೆ ಈ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸದವರಿಗೆ ದಂಡ ವಿಧಿಸುವಂತಹ ಕಾರ್ಯಕ್ಕೂ ಮುಂದಾಗಿದೆ. ಈ ಮೂಲಕವಾದರೂ ತ್ಯಾಜ್ಯದ ಸಮಸ್ಯೆ ನಿವಾರಣೆ ಆಗಬಹುದೋ ಎಂದು ಕಾದು ನೋಡಬೇಕಾಗಿದೆ.