ಮಂಗಳೂರು: ಕತ್ತಲೆ ಪರಿಹಾರವಾಗಬೇಕಾದರೆ ದೀಪ ಹಚ್ಚಬೇಕು. ಪಶ್ಚಿಮದ ಬಗ್ಗೆ ಬೇಜಾರಿದ್ದರೆ ಪೂರ್ವಕ್ಕೆ ಹೋದರೆ ಸಾಕು, ಪಶ್ಚಿಮ ಹಿಂದೆ ಉಳಿಯುತ್ತದೆ ಎಂದು ರಾಮಚಂದ್ರಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಪುರಭವನದಲ್ಲಿ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಅನೇಕ ಸವಾಲುಗಳು ಎದುರಾದವು. ಅದಕ್ಕೆ ಉತ್ತರವಾಗಿ ನಾನು ಗೋಸ್ವರ್ಗ, ವಿಷ್ಣುಗುಪ್ತ ವಿದ್ಯಾಪೀಠ ಸ್ಥಾಪನೆ ಮಾಡಿದೆ. ಮೊದಲು ಎಷ್ಟು ಕೆಲಸ ಮಾಡುತ್ತಿರುತ್ತೇವೋ ಅದಕ್ಕಿಂತ ನೂರು ಪಾಲು ಹೆಚ್ಚಿಗೆ ಕೆಲಸ ಮಾಡುವುದೇ ಇದಕ್ಕೆ ಉತ್ತರ ಎಂದು ಹೇಳಿದರು.
ವಿಷ್ಣುಗುಪ್ತ ವಿಶ್ವವಿದ್ಯಾಲಯದ ಕಾರ್ಯ ಪ್ರಾರಂಭವಾದಂದಿನಿಂದ ಯಾವುದಕ್ಕೂ ಕೊರತೆ ಉಂಟಾಗಲಿಲ್ಲ. ಏಪ್ರಿಲ್ 26ರಂದು ವಿದ್ಯಾರಂಭವಾಗಲಿದ್ದು, ಆ ಸಮಯಕ್ಕೆ ಸುಮಾರು 25 ಕೋಟಿ ರೂಪಾಯಿ ಹಣ ಸಂಗ್ರಹವಾಗಲಿದೆ ಎಂಬ ನಂಬಿಕೆಯಿದೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ಕೂಡಾ ನಮ್ಮಲ್ಲಿರಲಿಲ್ಲ. ಎಲ್ಲವೂ ನಮಗೆ ಒದಗಿ ಬಂತು. ಆದ್ದರಿಂದ ಯಾವುದಕ್ಕೂ ನಮಗೆ ಈವರೆಗೆ ಕೊರತೆ ಉಂಟಾಗಿಲ್ಲ. ಇದು ನಮ್ಮಿಂದಾದ ಕಾರ್ಯವಲ್ಲ. ಇದರ ಹಿಂದೆ ಬೇರೊಬ್ಬನಿದ್ದಾನೆ ಎಂದು ಶ್ರೀ ರಾಘವೇಶ್ವರ ಭಾರತೀ ಹೇಳಿದರು.