ನೆಲ್ಯಾಡಿ : ಪ್ರತಿ ವರ್ಷವೂ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಎಂಬ ವ್ಯಕ್ತಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ವಿಶೇಷ ರೀತಿ ಸಂದೇಶವನ್ನು ಸಾರುತ್ತ ಬಂದಿದ್ದು, ಈ ಬಾರಿಯೂ ತಮ್ಮ ಯಾತ್ರೆಯನ್ನು ಆರಂಭಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ವಿನ್ಸೆಂಟ್ ಮೆನೇಜಸ್ ಎಂಬ ವ್ಯಕ್ತಿ ಪ್ರತಿವರ್ಷ ಕ್ರಿಸ್‌ಮಸ್ ಹಬ್ಬ ಬಂದರೆ ಸಾಕು ತನ್ನ ದ್ವಿಚಕ್ರ ವಾಹನವನ್ನು ಸಿಂಗರಿ ಸಾಂತಾಕ್ಲಾಸ್ ವೇಷ ಧರಿಸಿ ಜಿಲ್ಲೆಯಾದ್ಯಂತ ತೆರಳಿ ಕ್ರಿಸ್‌ಮಸ್ ಸಂದೇಶ ನೀಡುತ್ತಾರೆ. ಪ್ರಸಕ್ತ 20ನೇ ವರ್ಷದ ಯಾತ್ರೆಗೆ ಚಾಲನೆ ನೀಡಿದ್ದಾರೆ.
ಕ್ರಿಸ್ಮಸ್ ಹಬ್ಬದ ವಿಶೇಷತೆಯ ಕುರಿತು ಜಿಲ್ಲೆಯಾದ್ಯಂತ ಸಂದೇಶ ಸಾರುತ್ತಾರೆ. ಅಲ್ಲದೇ ಸಮಾಜದಲ್ಲಿ ಶಾಂತಿ ಸೌಹಾರ್ದತೆ ವೃದ್ಧಿಯಾಗಬೇಕು ಎನ್ನುವ ಉದ್ದೇಶದಲ್ಲಿ ಪ್ರತಿ ವರ್ಷ ಇವರು ಈ ಯಾತ್ರೆ ಕೈಗೊಳ್ಳುತ್ತಿದ್ದು, ಹಲವು ವಿಶೇಷ ಮಕ್ಕಳ ಶಾಲೆಗಳು, ಬಡ ವಿದ್ಯಾರ್ಥಿಗಳಿಗೆ ಸಿಹಿ ಹಂಚಿಕೆ ಮಾಡುತ್ತಾರೆ.
ಗಿಡಮರ ಬೆಳೆಸಿ, ಪರಿಸರವನ್ನು ಉಳಿಸಿ ಎನ್ನುವ ಸ್ಲೋಗನ್‌ನ ಪೋಸ್ಟರ್ ಮೂಲಕ ತನ್ನ ವಾಹನದಲ್ಲಿರಿಸಿ ಜಿಲ್ಲೆಯ ಜನತೆಗೆ ಕ್ರಿಸ್‌ಮಸ್ ಹಬ್ಬದ ಸಂದೇಶದ ಜೊತೆಗೆ ಪರಿಸರ ಕಾಳಜಿಯನ್ನು ವಿಶೇಷವಾಗಿ ಈ ವರ್ಷ ವ್ಯಕ್ತಪಡಿಸುತ್ತಿದ್ದಾರೆ.