ಮಂಗಳೂರು: ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ವಿನಯ್ ಎ. ಗಾಂವ್ಕರ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ವಿನಯ್ ಎ. ಗಾಂವ್ಕರ್ ಅವರಿಗೆ ಇತ್ತೀಚೆಗಷ್ಟೇ ಪದೋನ್ನತಿಯಾಗಿದ್ದು, ಆದರೆ ಇದುವರೆಗೆ ಯಾವುದೇ ಹುದ್ದೆ ನೀಡಿರಲಿಲ್ಲ. ಇದೀಗ ಈ ಹಿಂದಿನ ಉಪ ಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿರುವುದರಿಂದ ಅವರ ಸ್ಥಾನಕ್ಕೆ ನೂತನ ಉಪಪೊಲೀಸ್ ಆಯುಕ್ತರಾಗಿ ವಿನಯ್ ಗಾಂವ್ಕರ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಇವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ರಾಜ್ಯ ಪೊಲೀಸ್ ಇಲಾಖೆಯ ಐಪಿಎಸ್, ನಾನ್ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಶುಕ್ರವಾರ ನಡೆದಿದ್ದು, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮೀ ಗಣೇಶ್ ಸೇರಿದಂತೆ 8 ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದೆ.
ಲಕ್ಷ್ಮೀಗಣೇಶ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಅಧೀಕ್ಷಕರಾಗಿ ಸಿ.ಎನ್. ಬೋಪಯ್ಯ ಅವರನ್ನು ನಿಯುಕ್ತಿಗೊಳಿಸಿ, ರಾಜ್ಯ ಸರ್ಕಾರ ಆದೇಶ ಮಾಡಿದೆ.
ಮಂಗಳೂರು ನಗರ ಸಂಚಾರ ವಿಭಾಗದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಮಂಜುನಾಥ್ ಶೆಟ್ಟಿ ಅವರನ್ನು ಇತ್ತೀಚೆಗೆ ಪದೋನ್ನತಿಗೊಳಿಸಲಾಗಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ ನಿಯುಕ್ತಿಗೊಳಿಸಲಾಗಿದೆ.