ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿಯನ್ನು ಕೈ ಬಿಡುವಂತೆ ಇನ್ನೊಮ್ಮೆ ಸರ್ಕಾರವನ್ನು ಒತ್ತಾಯಿಸಲು ಗ್ರಾಮಮಟ್ಟದಿಂದಲೇ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಳಿನೆಲೆಯಲ್ಲಿ ನಡೆದ ಮಲೆನಾಡು ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಯಿತು.
ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ 3 ತಾಲೂಕುಗಳ ವರದಿಯಲ್ಲಿ ಉಲ್ಲೆಖಿಸಿರುವ ಗ್ರಾಮಸ್ಥರನ್ನು ಸೇರಿಸಿಕೊಂಡು ಆಯಾ ಗ್ರಾ.ಪಂ.ಗೆ ಮನವಿ ನೀಡಿ ಗ್ರಾಮಮಟ್ಟದಿಂದಲೇ ವರದಿ ವಿರುದ್ಧ ಇನ್ನೊಂದು ಉಗ್ರ ಹೋರಾಟ ಆರಂಭಿಸಲಿದ್ದೇವೆ. ಕೃಷಿಕರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿಯ ವಿರುದ್ಧ ಗ್ರಾಮ, ತಾಲೂಕು ಕಚೇರಿ ಎದುರು ಧರಣಿ ನಡೆಸಿ ಮನವಿ ನೀಡಲಾಗುವುದು. ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಸಹಾಯಕ ಆಯುಕ್ತರ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ವರದಿ ಜಾರಿ ಕೈ ಬಿಡದೆ ಇದ್ದಲ್ಲಿ ಈ ಹಿಂದಿನ ಶೈಲಿಯಲ್ಲಿಯೇ ಹೋರಾಟ ಮುಂದುವರೆಯಲಿದೆ. ದ.ಕ ಜಿಲ್ಲೆಯ 48 ಗ್ರಾಮಗಳನ್ನು ಅರಣ್ಯ ಮಾಡುವ ಈ ವರದಿಯ ಉದ್ದೇಶದ ವಿರುದ್ಧ ಸರ್ವರನ್ನು ರಾಜಕೀಯ ರಹಿತವಾಗಿ ಒಗ್ಗೂಡಿಸಿಕೊಂಡು, ಸರ್ಕಾರದ ಗಮನಕ್ಕೆ ತಂದು ಹೋರಾಟ ನಡೆಸಲಾಗುವುದು ಎಂದರು.
ಬಿಳಿನೆಲೆ ಸಿಎ ಬ್ಯಾಂಕ್ ಅಧ್ಯಕ್ಷ ದಾಮೋಧರ ಗುಂಡ್ಯ ಮಾತನಾಡಿ, ಜನಸಮೂಹಕ್ಕೆ ಮಾರಕ ಯೋಜನೆಗಳ ವಿರುದ್ಧ ಮಾಧ್ಯಮ ವರದಿಗಳ ಜಾಗೃತಿಯಿಂದ ನಡೆದ ಹೋರಾಟಗಳಿಂದ ಕೆಲ ಯೋಜನೆಗಳು ತಾತ್ಕಾಲಿಕ ತಡೆಯಲ್ಲಿದೆ. ಇದೀಗ ಕಸ್ತೂರಿ ರಂಗನ್ ವರದಿ ಜಾರಿಗೆ ಮುಂದಾಗಿರುವುದು ಸರಿಯಲ್ಲ. ಅರಣ್ಯ ಇಲಾಖೆಯಲ್ಲಿ ಪ್ರಸ್ತುತ ಹೆಚ್ಚುವರಿಯಾಗಿ ಭೂಮಿ ಇದೆ ಎಂದು ಸರ್ಕಾರದ ದಾಖಲೆಗಳೇ ತಿಳಿಸುತ್ತಿರುವಾಗ ಈ ವರದಿಯ ಉದ್ದೇಶ ಏನೆಂದು ಪ್ರಶ್ನಿಸಿದ ಅವರು, ಅರಣ್ಯ ಇಲಾಖೆಯವರು ಜನರನ್ನು ಒಕ್ಕಲ್ಲೆಬ್ಬಿಸುವಂತೆ ಮಾಡುವ ಉದ್ದೇಶ ಇದು ಎಂದು ದೂರಿದರು.