ಮಂಗಳೂರು: ಲಾಭದಲ್ಲಿ ನಡೆಸುತ್ತಿದ್ದ ಕರಾವಳಿಯ ಪ್ರತಿಷ್ಠಿತ ವಿಜಯಾ ಬ್ಯಾಂಕ್ನ್ನು ನಷ್ಟದಲ್ಲಿದ್ದ ಬರೋಡಾ ಬ್ಯಾಂಕ್ನೊಂದಿಗೆ ವಿಲೀನಗೊಳಿಸಿದ್ದು ಸರ್ವಾಧಿಕಾರಿ ಧೋರಣೆ ಎಂದು ವಿಜಯಾ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಬ್ಬಯ್ಯ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಆರ್ಎಸ್ಎಸ್ ಕಟ್ಟಾ ಅನುಯಾಯಿಯಾದ ನಾನು ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬ್ಯಾಂಕ್ನ ಅಭಿವೃದ್ಧಿಯ ರೂವಾರಿ ಸುಂದರ ರಾಮ ಶೆಟ್ಟರೊಂದಿಗೆ ಬ್ಯಾಂಕ್ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೆ. ಆದರೆ ಬ್ಯಾಂಕ್ ವಿಲೀನಗೊಳಿಸುವ ಸಂದರ್ಭ ತಮ್ಮಲ್ಲಿ ಒಂದು ಮಾತನ್ನು ಪ್ರಸ್ತಾವಿಸದೆ ಈ ರೀತಿಯ ನಿರ್ಧಾರ ಕೈಗೊಂಡಿದ್ದು ಬೇಸರ ತಂದಿದೆ ಎಂದರು.
ಬಿಜೆಪಿ ಹಾಗೂ ಆರ್ಎಸ್ಎಸ್ನ ಬೆಳವಣಿಗೆಯಲ್ಲಿ ವಿಜಯಾ ಬ್ಯಾಂಕ್ನ ಪಾತ್ರ ಬಹಳ ಮಹತ್ತರವಾದುದು. ಈ ಬಗ್ಗೆ ಈಗಿನವರಿಗೆ ಯಾರಿಗೂ ತಿಳಿದಿಲ್ಲ. ಈ ಬ್ಯಾಂಕ್ ಮುಚ್ಚುವ ಸಂದರ್ಭದಲ್ಲೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಹಾಗೂ ಇತರ ಶಾಸಕರು ತಡೆಯುವ ಪ್ರಯತ್ನ ಮಾಡಿಲ್ಲ. ಇವರಾರಿಗೂ ಪ್ರಧಾನಿ ಮೋದಿ ಜೊತೆಗೆ ಮಾತನಾಡಲು ಧೈರ್ಯವಿಲ್ಲ ಎಂದು ಕಿಡಿಕಾರಿದರು.
ಆಗಿನ ಕಾಲದಲ್ಲಿ ಬಂಟ ಸಮುದಾಯದ ಪ್ರತಿ ಮನೆ ಮನೆಯ ಹಣ ಒಟ್ಟು ಮಾಡಿ ಈ ವಿಜಯಾ ಬ್ಯಾಂಕ್ನ್ನು ಸ್ಥಾಪಿಸಲಾಗಿದೆ. ಆದರೆ ಈಗ ಅದೆ ಸಮುದಾಯದ ಓರ್ವ ಸಂಸದ ಹಾಗೂ ನಾಲ್ವರು ಶಾಸಕರಿದ್ದರೂ ಈ ಬ್ಯಾಂಕ್ನ್ನು ಉಳಿಸಲಾಗದಿರುವುದೆ ಬೇಸರದ ಸಂಗತಿ. ಕನಿಷ್ಠ ಪಕ್ಷ ಹಣಕಾಸು ಸಚಿವರ ಬಳಿ ತನ್ನನ್ನು ಕರೆದುಕೊಂಡು ಹೋಗಿ, ಈ ಬಗ್ಗೆ ನಾನು ಅವರಲ್ಲಿ ಮಾತನಾಡುವೆ ಎಂದು ಹಲವರಲ್ಲಿ ಹೇಳಿಕೊಂಡರು ಯಾರೂ ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.