ಮಂಗಳೂರು : ವಿಜಯಾ ಬ್ಯಾಂಕನ ಈಗ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ ಮಾಡಿರುವ ವಿಚಾರವಾಗಿ ವಿಜಯ ಬ್ಯಾಂಕ್ ಮಾಜಿ ನೌಕರರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಚರ್ಚಿಸಿದ ವೇಳೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದನ್ನು ಸರಿಪಡಿಸಲಾಗುವುದೆಂದು ಅವರು ಭರವಸೆಯನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದ ದಕ್ಷಿಣಕನ್ನಡ ಜಿಲ್ಲಾ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿಜಯ ಬ್ಯಾಂಕ್ ವಿಲೀನವನ್ನ ನರಸಿಂಹನ್ ಸಮಿತಿ ಆಧಾರದಲ್ಲಿ ಮಾಡಲಾಗಿದೆ ಎಂದು ಕೆಲವರು ವಾದಿಸುತ್ತಾರೆ. ಆದರೆ, ನರಸಿಂಹನ್ ಸಮಿತಿ ನೀಡಿದ ವರದಿಯಲ್ಲಿ ನಷ್ಟದಲ್ಲಿರುವ ಬ್ಯಾಂಕನ ಲಾಭದಲ್ಲಿರುವ ಬ್ಯಾಂಕ್ ಜೊತೆಗೆ ವಿಲೀನ ಮಾಡಲು ತಿಳಿಸಲಾಗಿತ್ತು. ಆದರೆ, ಲಾಭದಲ್ಲಿದ್ದ ವಿಜಯಾ ಬ್ಯಾಂಕ್‌ನ ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಜೊತೆಗೆ ವಿಲೀನ ಮಾಡಲಾಗಿದೆ. ಇದು ಸರಿಯಲ್ಲ ಎಂದು ಅವರು ಹೇಳಿದರು.
ಬಿಜೆಪಿ ಅಧಿಕಾರಾವಧಿಯಲ್ಲಿ ದಕ್ಷಿಣ ಕನ್ನಡದ ಹಲವು ಉದ್ಯಮಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ತೋಟಗಾರಿಕಾ ಕೇಂದ್ರವನ್ನು ಹೈದರಾಬಾದ್ಗೆ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗಿಗೆ ನೀಡಿದ್ದು ಬಿಜೆಪಿ ಅವಧಿಯಲ್ಲಿ ಅನ್ನೋದನ್ನ ಮರೆಯಬಾರದು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಚತುಷ್ಪತ ಕಾಮಗಾರಿ ಪ್ರಗತಿಯಾಗಿಲ್ಲ. ಇದೆಲ್ಲ ಸಮಸ್ಯೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೂರೈಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡ ಪ್ರೊ. ರಾಧಾಕೃಷ್ಣನ್, ಮಾಜಿ ಶಾಸಕರುಗಳಾದ ಜೆ.ಆರ್ ಲೋಬೋ, ಶಕುಂತಲಾ ಶೆಟ್ಟಿ ಉಪಸ್ಥಿತರಿದ್ದರು.