ಮಂಗಳೂರು: ರಾಜ್ಯಾದ್ಯಂತ ಭಾರೀ ತಲ್ಲಣ ಮೂಡಿಸಿದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ವಿಘ್ನೇಶ್ ನಾಯಕ್ ಭಾನುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮುಂದಿನ ತಿಂಗಳು ಆತನಿಗೆ ಮದುವೆ ಇದ್ದು, ಮದುವೆ ಮುರಿದು ಬಿದ್ದಿರೋದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅನ್ನೋದು ನಂಬಲಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ನರೇಂದ್ರ ನಾಯಕ್ ಸಂಶಯ ವ್ಯಕ್ತಪಡಿಸಿದ್ದಾರೆ.
'ಜಸ್ಟೀಸ್ ಫಾರ್ ವಿನಾಯಕ ಬಾಳಿಗ' ಅಭಿಯಾನದ ರೂವಾರಿಯಾಗಿರುವ ನರೇಂದ್ರ ನಾಯಕ್ ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿ, ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಓರ್ವ ಪ್ರಮುಖ ಸಾಕ್ಷಿ ಮರೆಯಾದರೆ ಯಾರಿಗೆ ಲಾಭವಾಗುತ್ತದೆ ಎಂದು ನೋಡಿದರೆ, ಕೇವಲ ಮದುವೆ ಮಾತುಕತೆ ಮುರಿದು ಬಿದ್ದಿರೋದಕ್ಕೆ ವಿಘ್ನೇಶ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಬಹಳಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ವಿನಾಯಕ ಬಾಳಿಗ ಹತ್ಯೆ ಪ್ರಕರಣವನ್ನು ಎಸ್ಐಟಿ ತನಿಖೆ ನಡೆಸಬೇಕೆಂದು ಅವರ ಸಹೋದರಿ ಅನುರಾಧಾ ಬಾಳಿಗ ಹೇಳುತ್ತಿದ್ದಾರೆ. ಅದನ್ನು ಸರ್ಕಾರ ಒಪ್ಪಿ ಎಸ್ಐಟಿ ಮಾಡಿದ್ದಲ್ಲಿ ವಿಘ್ನೇಶ್ ನಾಯಕ್ನಿಗೆ ಗೊತ್ತಿರುವ ವಿಚಾರಗಳು ಹೊರಬರಲೇಬೇಕು. ಆದ್ದರಿಂದ ವಿಘ್ನೇಶ್ ನಾಯಕ್ ಅವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಆತ್ಮಹತ್ಯೆ ಮಾಡುವಂತೆ ಪ್ರಚೋದನೆ ನೀಡಲಾಗಿದೆಯೇ ಎಂದು ನಮಗೆ ತಿಳಿದಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಈ ಪ್ರಕರಣವನ್ನು ಎಸ್ಐಟಿ ರಚಿಸಿ ವಿನಾಯಕ ಬಾಳಿಗ ಹತ್ಯೆ ಹಿಂದಿರುವ ಕೈ ಯಾರುದ್ದು ಎಂಬುದನ್ನು ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ವಿನಾಯ ಬಾಳಿಗ ಹಾಗೂ ಇದೀಗ ಆತ್ಮಹತ್ಯೆ ಮಾಡಿಕೊಂಡ ವಿಘ್ನೇಶ್ ನಾಯಕ್ ಇಬ್ಬರೂ ಬಿಜೆಪಿ ಕಾರ್ಯಕರ್ತರು. ಇಬ್ಬರೂ ಜಿಎಸ್ಬಿ ಸಮುದಾಯದವರೇ. ಇದೀಗ ಜಿಎಸ್ಬಿ ಯೂಥ್ ಎಂಬ ಸಂಘಟನೆ ಬಹಳಷ್ಟು ಪ್ರಚಾರದಲ್ಲಿದೆ. ಈ ಸಂಘಟನೆಗೆ ನಾನು ನೇರವಾಗಿ ಕೇಳುವುದೇನೆಂದರೆ ವಿನಾಯಕ ಬಾಳಿಗ, ವಿಘ್ನೇಶ್ ನಾಯಕ್ ಜಿಎಸ್ಬಿಗಳಲ್ಲವೇ? ಅವರು ಮೃತಪಟ್ಟಿರುವುದಕ್ಕೆ ಬರೀ ಶ್ರದ್ಧಾಂಜಲಿ, ಸಾಂತ್ವನ ಹೇಳಿದರೆ ಮಾತ್ರ ಸಾಕೇ? ವಿಘ್ನೇಶ್ ನಾಯಕ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಯಾಕೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರತಿಯೊಬ್ಬರೂ ಈ ಪ್ರಶ್ನೆಯನ್ನು ಕೇಳಬೇಕಾಗಿದೆ ಎಂದು ನರೇಂದ್ರ ನಾಯಕ್ ಹೇಳಿದರು.
ವಿನಾಯಕ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣವೊಂದರ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ತೀರ್ಪು ಹಾಗೂ ಅಂತಿಮ ಆದೇಶ ನ. 23ರಂದು ಹೊರ ಬೀಳುವುದಾಗಿ ಜಿಲ್ಲಾ ನ್ಯಾಯಾಲಯದ ವೆಬ್ ಪೋರ್ಟಲ್ನಲ್ಲಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ನ. 22ರಂದೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ವಿಘ್ನೇಶ್ ನಾಯಕ್ ಮೃತದೇಹ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದರು.