ಮಂಗಳೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಪ್ರಮುಖವಾದದ್ದು. ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ, ಮೌಲ್ಯಗಳಿರುವ ವಿಶ್ವವಿದ್ಯಾಲಯಗಳು ಬೇಕು. ಆದ್ರೆ, ಪ್ರಸ್ತುತ ದೇಶದಲ್ಲಿರುವ ವಿಶ್ವವಿದ್ಯಾಲಯಗಳು ಈ ಹಿಂದೆ ಇದ್ದ ಮೌಲ್ಯಗಳನ್ನು ಕಳೆದುಕೊಂಡಿವೆ ಎಂಬ ಆಪಾದನೆಗಳಿವೆ. ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರುವ ಕುಲಪತಿಗಳ ನೇಮಕಾತಿಯಲ್ಲಿ ಮೆರಿಟ್ ಪದ್ಧತಿ, ಬೇಕಾದ ಅರ್ಹತೆಗಳನ್ನು ಕೈಬಿಟ್ಟಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳಿದ್ದು, ಅಲ್ಲಿಗೆ ನಾಯಕರಾಗಿ ಗುರುತಿಸಿಕೊಳ್ಳುವ ಕುಲಪತಿಗಳು ಬೇಕೆ ಬೇಕು. ಇಂದಿನ ಕುಲಪತಿಗಳ ಆಯ್ಕೆ ಪ್ರಕ್ರಿಯೆ ರಾಜಕೀಯ, ಜಾತಿ ವ್ಯವಸ್ಥೆ, ಹಣಬಲದ ಮೇಲೆ ನಿಂತಿದ್ದು, ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬುದು ಕೆಲವರ ವಾದ.
ದೇಶದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವೂ ಒಂದು. ಮಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ಹೆಚ್ಚಿನ ವಿಶ್ವವಿದ್ಯಾನಿಲಯಗಳಲ್ಲಿ ಮೆರಿಟ್ ಆಧರಿತವಾಗಿ ಕುಲಪತಿ (ಉಪಕುಲಪತಿ ) ನೇಮಕ ನಡೆಯುತ್ತಿಲ್ಲ ಎಂಬ ಆಪಾದನೆಯಿದೆ.
ಇದನ್ನೂ ಓದಿ: ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಾಮಾಣಿಕವಾಗಿ ನಡೆಯುತ್ತಿದೆಯೇ?
ಹಿಂದೆ ದೇಶದ ಎಲ್ಲಾ ವಿಶ್ವವಿದ್ಯಾಯಗಳಲ್ಲಿ ಮೆರಿಟ್ ಆಧಾರದಲ್ಲಿ ಕುಲಪತಿಗಳ ನೇಮಕವಾಗುತ್ತಿತ್ತು. ಆದರೆ ಕಾಲಕ್ರಮೇಣ ಈ ಪದ್ಧತಿ ಬದಲಾಗಿದೆ. ಶೋಧನಾ ಕಮಿಟಿ ಎಂಬುದು ನಾಮಕಾ ವಾಸ್ತೆ ಆಗಿದ್ದು, ಅಧಿಕಾರದಲ್ಲಿರುವ ಪಕ್ಷದ ಪರವಾಗಿರುವವರು, ಅವರ ಬೆಂಬಲ ಇರುವವರು, ಹಣವುಳ್ಳವರು ಕುಲಪತಿಗಳಾಗಿ ಆಯ್ಕೆಯಾಗುತ್ತಿದ್ದಾರೆ. ಇದರಿಂದಾಗಿ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾಲಯಗಳು ಎಡವುತ್ತಿರುವುದನ್ನು ಕಾಣಬಹುದಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಮೆರಿಟ್ ಆಧಾರದಲ್ಲಿ ನಡೆಯುತ್ತಿದ್ದ ವಿವಿ ಕುಲಪತಿಗಳ ನೇಮಕವನ್ನು ಕೈಬಿಟ್ಟು ಪ್ರಭಾವದ ಮೂಲಕ ಆಯ್ಕೆ ಮಾಡುತ್ತಿರುವುದರಿಂದ ಉತ್ತಮ ಶಿಕ್ಷಣ ನೀಡುವುದರ ಮೇಲೆ ಕರಿನೆರಳು ಬಿದ್ದಿದೆ ಎಂಬ ಆರೋಪಗಳಿವೆ.