ಮಂಗಳೂರು: ದ.ಕ ಜಿಲ್ಲಾಡಳಿತ ಕೊರೊನಾ ನೆಪವೊಡ್ಡಿ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯನ್ನು ಕಳೆದ ಎಂಟು ತಿಂಗಳಿನಿಂದ ಮುಚ್ಚಿದೆ. ಇದರಿಂದ ವರ್ಷಕ್ಕೆ ಸುಮಾರು ಒಂದು ಕೋಟಿ ರೂ. ನಷ್ಟ ಉಂಟಾಗುತ್ತಿದೆ. ಕಂದಾಯ ತೆರಿಗೆ ಸಂಗ್ರಹಕ್ಕೆ ಕುತ್ತು ಉಂಟಾಗಿದೆ. ರಾತ್ರೋರಾತ್ರಿ ತರಾ ತುರಿಯಲ್ಲಿ ವ್ಯಾಪಾರಿಗಳನ್ನು ಅಲ್ಲಿಂದ ಎಬ್ಬಿಸಿ ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ ಎಂದು ಮಂಗಳೂರು ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಂಟ್ರಲ್ ಮಾರುಕಟ್ಟೆಯಲ್ಲಿ ಸುಮಾರು 479 ವ್ಯಾಪಾರಸ್ಥರು ಅಂಗಡಿ ನಡೆಸುತ್ತಿದ್ದರು. ನೌಕರರು, ಹಮಾಲಿ ಕಾರ್ಮಿಕರು, ಟೆಂಪೋ ಚಾಲಕರು ಸೇರಿ ಐದು ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿನ ಉದ್ಯೋಗವನ್ನ ನಂಬಿ ಜೀವನ ಸಾಗಿಸುತ್ತಿದ್ದರು. ಆದರೆ, ಜಿಲ್ಲಾಡಳಿತ ಸೆಂಟ್ರಲ್ ಮಾರುಕಟ್ಟೆಯನ್ನು ಮುಚ್ಚಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಬೀದಿಪಾಲು ಮಾಡಿದ್ದಾರೆ.
ನಮ್ಮಲ್ಲಿ ನಿತ್ಯ ಹಲವಾರು ಮಂದಿ ಸಮಸ್ಯೆ ಹೇಳಿಕೊಳ್ಳುತ್ತಾ, ಮಹಾನಗರ ಪಾಲಿಕೆ ನಮ್ಮನ್ನು ಬೀದಿಗೆ ತಂದಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಅಬ್ದುಲ್ ರವೂಫ್ ಹೇಳಿದ್ದಾರೆ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಪುರಭವನದ ಬಳಿ ಹಾಗೂ ಲೇಡಿಗೋಷನ್ ಆಸ್ಪತ್ರೆಯ ಬಳಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಅಲ್ಲಿ ವ್ಯಾಪಾರ ಮಾಡಲು ಹೇಳಲಾಗುತ್ತಿದೆ. ಜನರ ಓಡಾಟಕ್ಕಾಗಿ ನಿರ್ಮಾಣ ಮಾಡಿದ್ದ ಫುಟ್ಪಾತ್ನಲ್ಲಿ ಇದೀಗ ಕಾನೂನು ಬಾಹಿರವಾಗಿ ಶೆಡ್ ನಿರ್ಮಾಣ ಮಾಡಲಾಗಿದೆ.
ಆದರೆ, ಸೆಂಟ್ರಲ್ ಮಾರುಕಟ್ಟೆಯ ಯಾವೊಬ್ಬ ವ್ಯಾಪಾರಿಯೂ ಸಹ ಈ ಸ್ಥಳದಲ್ಲಿ ಕುಳಿತು ವ್ಯಾಪಾರ ಮಾಡಿಸಲು ಜಿಲ್ಲಾಡಳಿತಕ್ಕೆ ಇಷ್ಟರವರೆಗೆ ಸಾಧ್ಯವಾಗಿಲ್ಲ. ಸುಮ್ಮನೆ ಇದಕ್ಕೆ ಮಹಾನಗರ ಪಾಲಿಕೆ ಬಾಡಿಗೆ ಭರಿಸುತ್ತಿದೆ. ಈ ಮೂಲಕ ಸೆಂಟ್ರಲ್ ಮಾರುಕಟ್ಟೆಗೆ ಸರಿಯಾದ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದರು.
ಕಾಂಗ್ರೆಸ್ ಸಾಕಷ್ಟು ಕಾಲದಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಡಳಿತ ಮಾಡಿತ್ತು. ಆದರೆ, ಈ ರೀತಿಯ ಆಡಳಿತ ಎಂದಿಗೂ ಮಾಡಿರಲಿಲ್ಲ. ಕಾಂಗ್ರೆಸ್ ಕಾಲದಲ್ಲಿ ಅಳಕೆ, ಕಂಕನಾಡಿ, ಕದ್ರಿ, ಉರ್ವ, ಕಾವೂರು, ಬಿಜೈನಲ್ಲಿ ಮಾರುಕಟ್ಟೆಗಳನ್ನು ಮಾಡಲಾಗಿತ್ತು. ಎಲ್ಲಾ ಕಡೆಯೂ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಒದಗಿಸಿ ಆ ಬಳಿಕ ನೂತನ ಮಾರುಕಟ್ಟೆ ನಿರ್ಮಾಣ ಮಾಡಿ, ಬಳಿಕ ವ್ಯಾಪಾರಿಗಳಿಗೆ ಅಲ್ಲಿಗೆ ಸ್ಥಳಾಂತರ ಮಾಡಿಸಲಾಗಿದೆ.
ಅದೇ ರೀತಿ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳಿಗೂ ಪರ್ಯಾಯ ವ್ಯವಸ್ಥೆ ಮಾಡಿ ಬಳಿಕ ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಮಾಡಬಹುದಿತ್ತು. ಇದೀಗ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿಗಳು ಕೋರ್ಟ್ ಮೆಟ್ಟಿಲೇರಿದ್ದು, ಜಿಲ್ಲಾಡಳಿತ ಸೆಂಟ್ರಲ್ ಮಾರುಕಟ್ಟೆ ಮುಚ್ಚಬಾರದೆಂದು ನ್ಯಾಯಾಂಗ ತಡೆ ನೀಡಿದೆ. ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವ ಬದಲು ಈ ರೀತಿ ನಡೆಸುವುದು ಯಾವ ರೀತಿಯ ಆಡಳಿತ ಎಂದು ರವೂಫ್ ಬೇಸರ ವ್ಯಕ್ತಪಡಿಸಿದರು.