ಮಂಗಳೂರು (ದಕ್ಷಿಣ ಕನ್ನಡ): ಕಾಂತಾರ ಸಿನಿಮಾವನ್ನು ಮಂಗಳೂರಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತವಾಗಿ ಬಂದು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂತಾರಾ ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ನಾನು ಸಿನಿಮಾವನ್ನು ನೋಡದೇ ಬಹಳ ದಿನವಾಗಿತ್ತು. ಕಾಂತಾರದಲ್ಲಿ ದೈವಾರಾಧನೆಯನ್ನು ರಿಷಬ್ ಶೆಟ್ಟಿ ಬಹಳ ಚೆನ್ನಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಯುವಕರಿಗೆ ಹೊಸ ಕಥೆ, ಹಳೆಯ ಸ್ಮರಣೆ ಆಗುತ್ತದೆ. ಈ ಚಿತ್ರದಲ್ಲಿ ಹೊಸ ದೃಷ್ಠಿಕೋನವಿದೆ ಎಂದರು.
ಜಾತಿಮತ ಬೇಧ ಮರೆತು ಸಹಬಾಳ್ವೆ ಮಾಡಬೇಕು ಎಂಬ ಸಂದೇಶ ಈ ಚಿತ್ರದಲ್ಲಿ ಇದೆ. ಕಾಂತಾರಾ ಚಿತ್ರ ನೋಡಿ ಬಹಳ ಸಂತೋಷವಾಗಿದೆ. ಚಿತ್ರ ನೋಡಿದ ಬಳಿಕ ಕಾಂತಾರ ಮೂಡ್ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಎಲ್ಲ ಕಲಾವಿದರಿಗೂ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಬೆಳೆಯುತ್ತಿರುವ ತಂತ್ರಜ್ಞಾನವನ್ನು ರಿಷಬ್ ಶೆಟ್ಟಿ ಹೇಗೆ ಬಳಸಿದ್ದಾರೆ ಅನ್ನುವುದನ್ನು ಚಿತ್ರದಲ್ಲಿ ನೋಡಿದ್ದೇನೆ. ಕಲಾವಿದರು, ನಿರ್ಮಾಪಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ದೈವಾರಾಧನೆಯ ನಂಬಿಕೆಯು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ. ಸಮಾಜದಲ್ಲಿ ಸ್ವಾರ್ಥ, ವಶೀಕರಣ ಪ್ರಯತ್ನ ನಡೆಯುತ್ತದೆ. ಆದರೆ, ದೈವಗಳು ಸತ್ಯಕ್ಕೆ ಮಾತ್ರ ಬೆಲೆ ಕೊಡುತ್ತವೆ ಎನ್ನುವುದು ಚಿತ್ರದಲ್ಲೂ ಮೂಡಿ ಬಂದಿದೆ ಎಂದರು.
ನಟ ಚೇತನ್ ಅವರ ಭೂತಕೋಲದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೈವಾರಾಧನೆ ಹಿಂದೂ ಧರ್ಮದ ಭಾಗ ಹೌದಾ ಅಲ್ವಾ ಎನ್ನುವುದು ಗೊತ್ತಿಲ್ಲ. ಆದರೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಸ್ವಭಾವವನ್ನು ಅರಿಯದೇ ಮಾತನಾಡಿದರೆ ಬೇರೆಯಾಗುತ್ತದೆ. ಧರ್ಮದ ಮೂಲ ಹುಡುಕುತ್ತಾ ಹೋದರೆ ಎಲ್ಲಿಯೂ ಸಿಗುವುದಿಲ್ಲ.
ಇದನ್ನೂ ಓದಿ: 'ವಾವ್ ರಿಷಬ್ ಶೆಟ್ಟಿ, ಹ್ಯಾಟ್ಸ್ ಆಫ್! ಸಿನಿಮಾ ಅಂದ್ರೆ ಕಾಂತಾರ': ಕಂಗನಾ ಗುಣಗಾನ
ನಂಬಿಕೆ ಆಚರಣೆ ನಡವಳಿಕೆ ಸ್ವಾಭಾವಿಕವಾಗಿ ಬೆಳೆದು ಬಂದಿದೆ. ಇದನ್ನು ನಾವು ಬಿಟ್ಟಿರೋಕೆ ಸಾಧ್ಯವೇ ಇಲ್ಲ. ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆಯನ್ನು ಹೋಗಿ ನೋಡಿದ್ದಾರೆ ಅನ್ನೋದು ಗೊತ್ತಿಲ್ಲ. ದೈವಾರಾಧನೆಗೆ ಎರಡು ಜಿಲ್ಲೆಯಲ್ಲಿ ವ್ಯಾಪಕವಾದ ನಂಬಿಕೆಯಿದೆ. ಇವತ್ತು ದೈವಾರಾಧನೆ ಮಾಡುತ್ತೇವೆ, ದೈವದ ನುಡಿಗೆ ಗೌರವ ಕೊಡುತ್ತೇವೆ, ದೈವ ಮೈಮೇಲೆ ಬಂದಾಗ ಮಾತಿಗೆ ಗೌರವ ಕೊಡುತ್ತೇವೆ. ಇದನ್ನು ಧರ್ಮಕ್ಕೆ, ಸೂಕ್ಷ್ಮಕ್ಕೆ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಹಿಂದಿ ಹೇರಿಕೆ ಹೇಗೆ ಒಪ್ಪೋಕಾಗಲ್ವೋ ಹಿಂದುತ್ವ ಹೇರಿಕೆಯನ್ನೂ ಒಪ್ಪಲಾಗಲ್ಲ: ನಟ ಚೇತನ್