ಮಂಗಳೂರು: ಜಿಲ್ಲೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಜನ ಸಾಮಾನ್ಯರು ಭಯದಲ್ಲಿ ಬದುಕುತ್ತಿದ್ದಾರೆ. ಎನ್ಆರ್ ಸಿ, ಸಿಎಎ ನೋಂದಣಿಗೆ ಯಾವುದೇ ಅಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಪಡಿಸಬೇಕಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು, ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿಗಳಿಗೆ ಮನೆ ಮನೆಗೆ ಬರುವಾಗ ಸ್ಪಷ್ಟವಾಗಿ ಯಾರೂ ಮಾಹಿತಿ ನೀಡುತ್ತಿಲ್ಲ. ಬಾಗಿಲು ಕೂಡಾ ತೆರೆಯುತ್ತಿಲ್ಲ. ಆದ್ದರಿಂದ ಯಾರಾದರೂ ಇಲಾಖಾ ಅಧಿಕಾರಿಗಳು ಮನೆಗೆ ಬಂದಾಗ ಗಾಬರಿಯಾಗುವುದು ಬೇಡ. ಅವರು ಮೌಖಿಕವಾಗಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ, ಸಹಿ ಹಾಕುವಾಗ ಓದಿ ಸಹಿ ಹಾಕಿ. ಎನ್ಆರ್ಸಿ ಕಾಯ್ದೆ ಅಷ್ಟೊಂದು ಸುಲಭದಲ್ಲಿ ಜಾರಿಯಾಗಲು ನಾವು ಬಿಡುವುದಿಲ್ಲ. ಇದಕ್ಕೆ ಸಂಬಂಧಿಸಿ ಜಿಲ್ಲೆಯ ಜನತೆಗೆ ಸ್ಪಷ್ಟವಾಗಿ ಮಾಹಿತಿ ನೀಡಲಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರ ತಮ್ಮದೇ ಆದ ಗೊಂದಲದಿಂದ ಆಡಳಿತದಲ್ಲಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಹಿಡಿತವಿಲ್ಲದ ಪರಿಸ್ಥಿತಿ ಉಂಟಾಗಿದೆ. ಪ್ರಕೃತಿ ವಿಕೋಪದ ಪರಿಹಾರ ಇನ್ನೂ ನೀಡಿಲ್ಲ. ವಸತಿ ಯೋಜನೆಯ ಅನುದಾನ ಮಂಜೂರಾಗಿಲ್ಲ. ಸರ್ಕಾರಿ ನೌಕರರಿಗೆ ವೇತನ ಪಾವತಿಯಾಗಿಲ್ಲ. ಇದೆಲ್ಲದರ ಬಗ್ಗೆ ಚರ್ಚೆ ಮಾಡಲು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಅಧಿವೇಶನ ನಡೆಸಬೇಕಿತ್ತು. ಚಳಿಗಾಲದ ಅಧಿವೇಶನವೇ ನಡೆದಿಲ್ಲ.
ಬೆಳಗಾವಿಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದು ಹೇಳಿದ್ದರು. ಅಲ್ಲದೆ ಜನವರಿಯಲ್ಲಿ ನಡೆಯಬೇಕಾದ ಜಂಟಿ ಅಧಿವೇಶನವೂ ನಡೆದಿಲ್ಲ. ಇವರ ಪಕ್ಷದೊಳಗಿನ ಗೊಂದಲವನ್ನು ಜನ ಸಾಮಾನ್ಯರ ಮೇಲೆ ಯಾಕೆ ಹೇರಬೇಕು. ಆದ್ದರಿಂದ ರಾಜ್ಯ ಸರಕಾರ ಆದಷ್ಟು ಬೇಗ ಅಧಿವೇಶನ ಕರೆಯಬೇಕು ಎಂದು ಯು.ಟಿ.ಖಾದರ್ ಹೇಳಿದ್ದಾರೆ.