ಮಂಗಳೂರು: 'ಟೂಲ್ಕಿಟ್ಗೆ ಸಂಬಂಧಿಸಿದಂತೆ ಮಾಹಿತಿಯನ್ನು ತಯಾರು ಮಾಡಿ ಬಳಿಕ ಕಾಂಗ್ರೆಸನ್ನು ದೋಷಿಸಲು ಮುಂದಾದ ಬಿಜೆಪಿ ಸಿಕ್ಕಿಬಿದ್ದಿದೆ. ಈ ಮೂಲಕ ಬಿಜೆಪಿಯ ನಿಜಬಣ್ಣ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೆಹಲಿಯಲ್ಲಿ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಆಡಳಿತ ನಡೆಸುವುದು ಬಿಜೆಪಿಯವರದ್ದೇ ಸರ್ಕಾರ ಆಗಿದ್ದರಿಂದ ಈ ಬಗ್ಗೆ ಅವರು ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಜನಸಾಮಾನ್ಯರ ಮುಂದೆ ಅವರ ಮುಖವಾಡ ಕಳಚಿ ಬಿದ್ದಂತಹ ಸಂದರ್ಭದಲ್ಲಿ ಬಿಜೆಪಿ ಹಾಗೂ ನಾಯಕರ ವರ್ಚಸ್ಸನ್ನು ರಕ್ಷಣೆ ಮಾಡಲು ಅತ್ಯಂತ ಕೀಳು ಮಟ್ಟದ ಪ್ರವೃತ್ತಿಗೆ ಇಳಿದಿದೆ. ಇದು ಇಡೀ ದೇಶವೇ ಅತ್ಯಂತ ನಾಚಿಕೆಗೊಳಪಡುವ ಸಂಗತಿ. ಎಲ್ಲರೂ ಜನರಿಗೆ ಆಕ್ಸಿಜನ್ ಬೇಕೆಂದು ಒದ್ದಾಟ ನಡೆಸುವ ಸಂದರ್ಭದಲ್ಲಿ ಬಿಜೆಪಿ ತಮ್ಮ ಪಕ್ಷದ ಉಳಿವಿಗಾಗಿ ಆಕ್ಸಿಜನ್ ಹುಡುಕಾಟ ನಡೆಸುತ್ತಿದ್ದಾರೆ. ಬಿಜೆಪಿ ಯಾವಾಗಲೂ ತಮ್ಮ ಪಕ್ಷ, ಆಡಳಿತ ಹಾಗೂ ನಾಯಕರಿಗೆ ಕಳಂಕ ಬರುತ್ತದೆ ಎಂಬ ಸಂದರ್ಭದಲ್ಲಿ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ತಂತ್ರಗಾರಿಕೆ ಮಾಡುತ್ತದೆ. ಈ ಬಾರಿಯೂ ಅದೇ ರೀತಿ ಮಾಡಿ ಸಿಕ್ಕಿಬಿದ್ದು, ಅತ್ಯಂತ ನಾಚಿಕೆ ಪಡುವ ಸಂಗತಿ ಪಕ್ಷಕ್ಕೆ ಆಗಿದೆ ಎಂದು ಶಾಸಕ ಖಾದರ್ ಹೇಳಿದರು.
ಈಗ ಖಾಸಗೀಕರಣ ಮಾಡುತ್ತಿರುವವರು ದೇಶಪ್ರೇಮಿಗಳು. ರಾಷ್ಟ್ರೀಕರಣ ಮಾಡಿದವರು ದೇಶದ್ರೋಹಿಗಳು ಎಂದು ಹೇಳುವ ಪರಿಸ್ಥಿತಿಗೆ ಬಂದು ತಲುಪಿದೆ. ಜನರು ಈ ಬಗ್ಗೆ ಆತ್ಮಾವಲೋಕನ ಮಾಡಬೇಕಿದೆ. ಎಷ್ಟು ಕಾಲ ಈ ಸುಳ್ಳು ಪ್ರಕಾರಗಳನ್ನು ಸಹಿಸಿಕೊಂಡು ಹೋಗಬಹುದು. ಲಸಿಕೆಯ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳಲಿಲ್ಲ. ಈ ಎಲ್ಲ ವೈಫಲ್ಯಗಳು ಹಾಗೂ ಜನರು ರೊಚ್ಚಿಗೆದ್ದಾಗ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ. ಇದಕ್ಕೆಲ್ಲ ಮುಂದೆ ಜನರು ಸರಿಯಾಗಿ ಉತ್ತರ ನೀಡಲಿದ್ದಾರೆ ಎಂದು ಖಾದರ್ ಹೇಳಿದರು.