ದಕ್ಷಿಣ ಕನ್ನಡ: ಕೊರೊನಾ ಹಾವಳಿಗಿಂತ ಕೊರೊನಾ ನಿಯಂತ್ರಣ, ನೆರವಿನ ಹೆಸರಲ್ಲಿ ಜನರಿಂದ ಹಣ ದೋಚುವ ನೀಚ ಕಾರ್ಯಗಳೇ ಹೆಚ್ಚಾಗಿವೆ. ಈ ಹಿನ್ನೆಲೆ ಉಪ್ಪಿನಂಗಡಿ ಪೊಲೀಸರು ಜನರಿಗೆ ನಕಲಿ ಜಾಲಗಳಿಗೆ ಬೀಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ -19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆನ್ಲೈನ್ನಲ್ಲಿ ಹಣ ಕಳಿಸಿ ಎಂಬ ನಕಲಿ ಪೋಸ್ಟ್ಗಳು ಹರಿದಾಡುತ್ತಿವೆ. ಕೆಲವರು ಹಣ ಮಾಡಿ ಅಮಾಯಕರಿಂದ ಹಣ ಕೇಳುತ್ತಿದ್ದಾರೆ. ಇದನ್ನು ಮನಗಂಡ ಉಪ್ಪಿನಂಗಡಿ ಪೊಲೀಸರು ಜನರಿಗೆ ಈ ನಕಲಿ ಜಾಲಗಳಿಗೆ ಬೀಳದಂತೆ ಸಲಹೆ ನೀಡಿದ್ದಾರೆ. ಪ್ರಧಾನ ಮಂತ್ರಿಗಳ, ಮುಖ್ಯಮಂತ್ರಿಗಳ ಪರಿಹಾರ ಖಾತೆಗೆ ನೇರವಾಗಿ ಹಣ ಕಳುಹಿಸುವಂತೆಯೂ ವಿನಂತಿಸಿದ್ದಾರೆ.
ನಕಲಿ ಕರೆಗಳು ಬಂದಾಗ ತಮ್ಮ ಬ್ಯಾಂಕ್ ಅಕೌಂಟ್ ಗೆ ಸಂಬಂಧಿಸಿದಂತಹ ಯಾವುದೇ ದಾಖಲೆಗಳನ್ನು ಅಥವಾ ಗೌಪ್ಯ ಮಾಹಿತಿಯನ್ನು ನೀಡಬಾರದು. ಈ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಸಂಬಂದಿಸಿದ ಬ್ಯಾಂಕ್ ಗಳಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಿರಿ. ಅಥವಾ ತಮ್ಮ ತಮ್ಮ ಬೀಟ್ ಪೊಲೀಸರಲ್ಲಿ ಅಥವಾ ಉಪ್ಪಿನಂಗಡಿ ಪೊಲೀಸ್ ಉಪ ನಿರೀಕ್ಷಕರಿಗೆ ಕರೆ ಮಾಡಿ ಅಥವಾ ಠಾಣೆಗೆ ನೇರವಾಗಿ ಬಂದು ದೂರು ನೀಡಿ ಎಂದು ಉಪ್ಪಿನಂಗಡಿ ಠಾಣಾಧಿಕಾರಿಗಳಾದ ಈರಯ್ಯ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.