ಮಂಗಳೂರು : ಪರಸ್ಪರ ಹೊಡೆದಾಟವೂ ಇಲ್ಲಿ ಒಂದು ರೀತಿಯ ಆರಾಧನಾ ಕ್ರಮ. ಇದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಗೋಲು ಪರಿಸರದ ಜನ ಆಚರಿಸಿಕೊಂಡು ಬರುತ್ತಿರುವ ಒಂದು ವಿಶಿಷ್ಟ ರೀತಿಯ ಆಚರಣೆ. ಅಂದ ಹಾಗೆ ಈ ಆಚರಣೆ ರಕ್ತಪಾತಕ್ಕೋಸ್ಕರವಲ್ಲ. ನಾಡಿನಲ್ಲಿ ಸಂಘರ್ಷವನ್ನು ತಡೆಯುವ ಸದುದ್ದೇಶ ಈ ಆರಾಧನೆಯ ಮುಖ್ಯ ಉದ್ದೇಶ.
ಒಬ್ಬರಿಗೊಬ್ಬರು ಹೊಡೆದಾಟದಲ್ಲಿ ತೊಡಗಿಕೊಂಡಿರುವುದನ್ನು ನೋಡಿದಾಗ ಇವರ ಮಧ್ಯೆ ತೀವ್ರ ವೈಷಮ್ಯವಿದೆ ಎಂದು ಅಡ್ಡಣಪೆಟ್ಟು ಎನ್ನುವ ವಿಶಿಷ್ಟ ಆಚರಣೆಯನ್ನು ಮೊದಲ ಬಾರಿ ನೋಡುವವರು ತಿಳಿಯಬಹುದು. ಆದರೆ, ಈ ಆಚರಣೆ ವೈಷಮ್ಯವನ್ನು ಮೀರಿ ಶಾಂತಿ ನೆಲೆಸುವ ಉದ್ದೇಶದಿಂದ ಮಾಡುವಂತಹ ಒಂದು ರೀತಿಯ ವಿಶಿಷ್ಟ ಹೊಡೆದಾಟ.
ಇದು ತುಳುನಾಡಿನ ಭೂತಾರಾಧನೆಯಲ್ಲಿ ಬರುವ ಒಂದು ವಿಶಿಷ್ಟ ಆಚರಣೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಗೋಲು ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುವ ಉಳ್ಳಾಕುಲು ದೈವದ ನೇಮೋತ್ಸವ ಕಂಡು ಬರುವ ಒಂದು ರೋಮಾಂಚಕ ದೃಶ್ಯವಿದೆ. ಹಿಂದೆ ಈ ಪ್ರದೇಶವನ್ನು ಬಳ್ಳಾಲರು ಆಳುತ್ತಿದ್ದ ಸಂದರ್ಭ ಇಲ್ಲಿನ ಅಣ್ಣ ತಮ್ಮಂದಿರಲ್ಲಿ ಜಾಗದ ವಿಷಯಕ್ಕೆ ಸಂಬಂಧಪಟ್ಟಂತೆ ವಿವಾದವು ಸಂಘರ್ಷದ ಘಟ್ಟಕ್ಕೆ ಬಂದು ಉಳ್ಳಾಲರು ದೇವರನ್ನು ಸಾಕ್ಷಿಯಾಗಿಟ್ಟು, ನ್ಯಾಯ ಧರ್ಮಕ್ಕೋಸ್ಕರ ಸಹೋದರರ ನಡುವೆ ಪಂಥಕ್ಕೋಸ್ಕರ ಯುದ್ದ ನಡೆಸುತ್ತಾರೆ.
ಯುದ್ದವು ಎಲ್ಲೆ ಮೀರಿ ರಕ್ತಪಾತವಾಗುವ ಸಂದರ್ಭ ಬಂದಾಗ ಸ್ವತಃ ದೈವವೇ ಬಂದು ಸಹೋದರರ ನಡುವಿನ ಯುದ್ದವನ್ನು ತಡೆಯುತ್ತದೆ. ನಾಡಿನಲ್ಲಿ ಸಂಘರ್ಷವಾಗುವುದನ್ನು ತಡೆಯುವ ಉದ್ದೇಶದಿಂದ ಇದು ಆರಾಧನಾ ಪದ್ಧತಿಯಾಗಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದು, ಅಡ್ಡನ ಹೊಡೆತ ಎನ್ನುವ ಮೂಲಕ ಪ್ರಸಿದ್ದಿಯಾಗಿದೆ.
ಅಡ್ಡನ ಹೊಡೆತದಲ್ಲಿ ಇಲ್ಲಿನ ನಾಲ್ಕು ಊರುಗಳನ್ನು ಪ್ರತಿನಿಧಿಸುವ ನಾಲ್ಕು ಮಂದಿ ಪರಸ್ಪರರು ಹೊಡೆದಾಡಿಕೊಳ್ಳುವುದು ಇದರ ಸಂಪ್ರದಾಯ. ಈ ಅಡ್ಡನ ಹೊಡೆತದಲ್ಲಿ ಭಾಗವಹಿಸುವವರು 5 ದಿನಗಳ ಕಾಲ ವ್ರತಾಚರಣೆಯನ್ನು ಪಾಲಿಸಿಕೊಂಡು ಬರುತ್ತಾರೆ. ಇದರಿಂದ ಹೊಡೆತ ಮೈಮೇಲೆ ತಾಗಿದರೂ ಯಾವುದೇ ಗಾಯವಾಗುವುದಿಲ್ಲ ಎನ್ನುವುದು ಇವರ ನಂಬಿಕೆ. ಇದನ್ನು ವೀಕ್ಷಿಸಲು ದಕ್ಷಿಣ ಕನ್ನಡ ಜಿಲ್ಲೆಯ ಕೊಡಗು ಹಾಗೂ ಕಾಸರಗೋಡು ಜಿಲ್ಲೆಯೆಲ್ಲೆಡೆಯಿಂದ ಜನರು ಸಾವಿರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಓದಿ: ಕಾಂಗ್ರೆಸ್ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡ್ತಿದೆ: ರೇಣುಕಾಚಾರ್ಯ