ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿ ಗ್ರಾಮದಿಂದ 250 ಮಂದಿಯನ್ನು ಕರೆತರುವಂತೆ ಪಿಡಿಓಗಳಿಗೆ ಸೂಚಿಸಲಾಗಿದೆ. ಎರಡು ಜಿಲ್ಲೆಯ ಗ್ರಾ. ಪಂಗಳಿಂದ ಇಷ್ಟೊಂದು ಜನ ಬಂದರೆ ಕಾರ್ಯಕ್ರಮ ನಡೆಯುವ ಮೈದಾನ ಸಾಕಾಗುತ್ತಾ? ಇಲ್ವಾ? ಎನ್ನುವ ಪ್ರಶ್ನೆ ಎದುರಾಗಿದೆ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಇವರಿಗೆ ಕಾರ್ಯಕ್ರಮ ಮಾಡಲು ಮೈದಾನಕ್ಕಿಂತ ದೊಡ್ಡ ಜಾಗಬೇಕು ಅಂತಾ ಕಾಣಿಸುತ್ತಿದೆ. ಉಡುಪಿ-ದ.ಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಪಿಡಿಓಗಳಿಗೆ ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆಯಿಂದ ವಿ. ಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕು ಅಂತಾ ಸೂಚನೆ ನೀಡಲಾಗಿದೆ. ಗ್ರಾ.ಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವರಿಗೂ ನೋಟಿಸ್ ಹೋಗಿದೆ ಎಂದರು.
ಶಾಲೆ-ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳೂ ಕಾರ್ಯಕ್ರಮದಲ್ಲಿ ಬರುವಂತೆ ಮಾಡಲಾಗಿದೆ. ಎಲ್ಲಾ ಬ್ಯಾಂಕ್ಗಳಿಗೆ ಸೂಚನೆ ನೀಡಿ, ಬ್ಯಾಂಕ್ ಸವಲತ್ತು ಪಡೆದವರನ್ನು ಕರೆತರಬೇಕೆಂದು ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ನೀಡಿದಾಗ ಕೆಳ ಅಧಿಕಾರಿಗಳು ಜನರನ್ನು ಕರೆತರಲೇಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಅವರ ಮನೆಯವರನ್ನು ಆದರೂ ಕರೆತರಬೇಕು ಎಂದು ಅವರು ಹೇಳಿದರು.
ಒಂದು ವಾರದಿಂದ ಎಲ್ಲಾ ಅಧಿಕಾರಿಗಳು ಬ್ಯುಸಿ ಇದ್ದಾರೆ. ಎಲ್ಲಾ ಸಿಕ್ಕಸಿಕ್ಕ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬರಲು ಸೂಚಿಸಿದ್ದಾರೆ. ಇಷ್ಟೆಲ್ಲಾ ಸೂಚನೆ ನೀಡಿದ ಬಳಿಕ ಜನಸಾಗರವೇ ಬರಲಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಮೋದಿ ಮಂಗಳೂರಿಗೆ ಬರುವುದು ಸಂತೋಷ. ಅದನ್ನು ಸ್ವಾಗತಿಸುತ್ತೇವೆ. ದೇಶದ ಪ್ರಧಾನ ಮಂತ್ರಿ ಜಿಲ್ಲೆಗೆ ಬಂದಾಗ ಜಿಲ್ಲೆಗೆ ಸಿಕ್ಕ ಕೊಡುಗೆ ಬಗ್ಗೆ ಜನರು ನಿರೀಕ್ಷಿತರಾಗಿದ್ದಾರೆ. ಬಿಜೆಪಿ ಪ್ರತಿನಿಧಿಗಳು ಸಾವಿರಾರು ಕೋಟಿ ಯೋಜನೆಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾವಿರಾರು ಕೋಟಿ ಯೋಜನೆ ಅರ್ಪಿಸುವುದು ಯಾವುದು. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟಿದೆ? ಎಂಬುದು ಗೊತ್ತಾಗಬೇಕು ಎಂದರು.
ಎನ್ಎಂಪಿಟಿ ಹಿಂದೆ ಸರ್ಕಾರದಲ್ಲಿ ಇತ್ತು. ಇದನ್ನು ಈಗ ಕೆಲವು ಉದ್ದಿಮೆದಾರರಿಗೆ ನೀಡಿದ್ದಾರೆ. ಜಿಂದಾಲ್ ಪ್ಯಾಕ್ಟರಿಯ ಜೆ ಎಸ್ ಡಬ್ಲ್ಯು , ಬೇರೆ ಬೇರೆ ಖಾಸಗಿ ಕಂಪೆನಿಯ ದೊಡ್ಡ ದೊಡ್ಡ ಟ್ಯಾಂಕ್, ಪಾಮೋಲಿವ್ ಕಂಪೆನಿಯ ಯೋಜನೆಗೆ ಬರುತ್ತಿದ್ದಾರೆ. ಈ ಯೋಜನೆಗೆ ಸರ್ಕಾರ ದುಡ್ಡು ಹಾಕಿದೆಯೇ? ಎಂಬುದನ್ನು ತಿಳಿಸಬೇಕು. ಯಾರದೋ ಕೆಲಸ ಇವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಸ್ಪಷ್ಟಪಡಿಸಲಿ: ದ. ಕ ಜಿಲ್ಲೆಯ ಕೆಲವೊಂದು ಬೇಡಿಕೆ ಇನ್ನೂ ಬಗೆಹರಿದಿಲ್ಲ. ಪ್ರಧಾನಮಂತ್ರಿ ಬಂದಾಗ ಅದಕ್ಕೆ ಮುಕ್ತಿ ಕಾಣಬೇಕು. ಜನರ ಈ ಭಾವನೆ ಮತ್ತು ಬೇಡಿಕೆ ಈಡೇರಿಸಲು ಒಕ್ಕೊರಲಿನಿಂದ ಒತ್ತಾಯ ಮಾಡಬೇಕು. ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತು ತುಳುವನ್ನು ರಾಜಭಾಷೆ ಮಾಡುವ ಬಗ್ಗೆ ಘೋಷಣೆ ಮಾಡಲಿ. ಕಸ್ತೂರಿ ರಂಗನ್ ವರದಿ ರದ್ದಾಗುತ್ತಾ ಇಲ್ಲವ ಎಂಬುದನ್ನು ಈ ಸಭೆಯಲ್ಲಿ ಸ್ಪಷ್ಟಪಡಿಸಲಿ. Mrpl, Nmpt, airport, bank, railway ಉದ್ಯೋಗದಲ್ಲಿ ಸ್ಥಳೀಯರು ವಂಚಿತರಾಗಿದ್ದಾರೆ. ತುಳು ಮತ್ತು ಕನ್ನಡಿಗರಿಗೆ ಆದ್ಯತೆಯ ಮೇಲೆ ಮೀಸಲಾತಿ ಇಡಲಿ ಎಂದರು.
ಒಂದು ಪೊಲೀಸ್ ಠಾಣೆ ಕಟ್ಟಿಲ್ಲ: ರಾಷ್ಟ್ರೀಯ ಹೆದ್ದಾರಿ ಸಂರ್ಪಕ ಇಲ್ಲ. ಸುರತ್ಕಲ್ ಟೋಲ್ ಗೊಂದಲ ಬಗೆಹರಿಸಲಿ. ಶಿರಾಡಿ ಘಾಟ್ ಸುರಂಗ ಬಗ್ಗೆ ಸ್ಪಷ್ಟಪಡಿಸಲಿ. 2018 ರ ಬಿಜೆಪಿ ಪ್ರಣಾಳಿಕೆಯಲ್ಲಿ ಮಂಗಳೂರಿನಲ್ಲಿ NIA ಮಾಡ್ತೇವೆ ಎಂದು ಬರೆದಿದ್ದಾರೆ. ಅಧಿಕಾರಕ್ಕೆ ಬಂದು ಒಂದು ಪೊಲೀಸ್ ಠಾಣೆ ಕಟ್ಟಿಲ್ಲ. ಇದರ ಬಗ್ಗೆ ಸ್ಪಷ್ಟಪಡಿಸಲಿ ಎಂದರು.
ಸರ್ಕಾರದ ದುಡ್ಡಿನಲ್ಲಿ ನಡೆಯುವ ಕಾರ್ಯಕ್ರಮ: ಮಂಗಳೂರು ಏರ್ಪೋರ್ಟ್ಗೆ ಕೋಟಿ ಚೆನ್ನಯ್ಯ ಏರ್ ಪೋರ್ಟ್ ಎಂದು ಘೋಷಿಸಲಿ. ಇದು ಸರ್ಕಾರದ ದುಡ್ಡಿನಲ್ಲಿ ನಡೆಯುವ ಕಾರ್ಯಕ್ರಮ. ಎಲ್ಲರನ್ನು ಕರೆದರೂ ಶಾಸಕನಾಗಿರುವ ನನ್ನನ್ನು ಕರೆದಿಲ್ಲ. ಆಹ್ವಾನ ಬಂದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆಲೋಚಿಸುತ್ತೇನೆ. ನಾನು ಕಾರ್ಯಕ್ರಮದಲ್ಲಿ ಇದ್ದರೆ ನಮ್ಮನ್ನು ಟೀಕಿಸಲು ಅವರಿಗೆ ಮುಜುಗರ ಆಗುವುದು. ಅವರು ಟೀಕಿಸುವಾಗ ನನಗೆ ಮುಜುಗರ ಆಗುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆಲೋಚಿಸುತ್ತೇನೆ ಎಂದು ಹೇಳಿದರು.
ಓದಿ: ಜಡಿಮಳೆಗೆ ನಲುಗಿದ ಬೆಂಗಳೂರಿನ ಬಡಾವಣೆಗಳು: ಎಲ್ಲೆಲ್ಲೂ ನೀರು, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್