ಬೆಳ್ತಂಗಡಿ(ದಕ್ಷಿಣ ಕನ್ನಡ): ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಎರಡು ದಿನಗಳ ಅಂತರದಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಬಳಿ ಈ ಅಪಘಾತಗಳು ಸಂಭವಿಸಿವೆ. ಶಿವಪ್ರಸಾದ್ ಹಾಗೂ ಹರ್ಷಿತ್ ಮೃತ ವಿದ್ಯಾರ್ಥಿಗಳು.
ನ.23 ರಂದು ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಪಾರೆಂಕಿ ವಸಂತ ನಾಯಕ್ ಎಂಬವರ ಪುತ್ರ ಶಿವಪ್ರಸಾದ್ ಕಾಲೇಜಿನಿಂದ ಸಂಜೆ 4.30 ರ ಸುಮಾರಿಗೆ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತಿದ್ದರು. ಈ ವೇಳೆ ಪಾರೆಂಕಿ ಎಂಬಲ್ಲಿ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅದೇ ರೀತಿ ನ.25 ರಂದು ಸಂಜೆ ಅದೇ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಸಂಜೆ ಕಾಲೇಜು ಮುಗಿಸಿ ಬೈಕಿನಲ್ಲಿ ಮನೆಗೆ ತೆರಳುತ್ತಿರುವ ಸಂದರ್ಭ ಬಳ್ಳಮಂಜ ರಸ್ತೆಯ ಬ್ರಹ್ಮಗಿರಿ ತಿರುವು ಬಳಿ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದು ಹಿಂಬದಿಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ತಲೆಗೆ ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಎರಡು ದಿನದ ಅಂತರದಲ್ಲಿ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಸ್ತೆ ಅಪಘಾತಕ್ಕೆ ದಾರುಣವಾಗಿ ಬಲಿಯಾಗಿದ್ದು, ಕಾಲೇಜು ಸೇರಿದಂತೆ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಇದನ್ನೂ ಓದಿ: ರಾಯಚೂರು: ಲಾರಿ ಹರಿದು ಬಳೆ ವ್ಯಾಪಾರಿ ಸಾವು