ಮಂಗಳೂರು: ಗಾಂಜಾ ಪ್ರಕರಣದಲ್ಲಿ ವೈದ್ಯ ಸೇರಿದಂತೆ ಮತ್ತೆ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧಿತರ ಸಂಖ್ಯೆ 15 ತಲುಪಿದೆ. ವೈದ್ಯರು ಹಾಗೂ ವೈದ್ಯಕೀಯ ಕಾಲೇಜು ಗಾಂಜಾ ಪ್ರಕರಣದ ಬೆನ್ನತ್ತಿರುವ ಪೊಲೀಸರು ಓರ್ವ ವೈದ್ಯ ಹಾಗೂ ಓರ್ವ ಸ್ನಾತ್ತಕೋತ್ತರ ಪದವಿ ವಿದ್ಯಾರ್ಥಿಯನ್ನು ಸೆರೆ ಹಿಡಿದಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರು ನಗರದ ಹಲ್ಸೂರು ನಿವಾಸಿ ನಗರದ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಮಾಡುತ್ತಿರುವ ವೈದ್ಯ ಬಾಲಾಜಿ (29) ಮತ್ತು ಆಂಧ್ರಪ್ರದೇಶದ ಅನಸ್ತೇಶಿಯಾ ಸ್ನಾತ್ತಕೋತ್ತರ ಪದವಿ ಪಡೆಯುತ್ತಿರುವ ರಾಘವ ದತ್ತಾ(28) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮಾತನಾಡಿ, ಈ ಪ್ರಕರಣದಲ್ಲಿ ಬಂಧಿತ ವೈದ್ಯ ಡಾ.ಬಾಲಾಜಿ ಫಳ್ನೀರ್ನಲ್ಲಿ ವಾಸ್ತವ್ಯವಿದ್ದ. ಈತ ತಾನು ವಾಸ್ತವ್ಯವಿರುವ ಮನೆಯಲ್ಲಿಯೇ ಸಣ್ಣಮಟ್ಟಿನ ಪಾರ್ಟಿ ಆಯೋಜಿಸಿ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದನು. ತನಿಖೆ ಮುಂದುವರಿದಿದ್ದು, ಇನ್ನೂ ಕೆಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಜನವರಿ 11ರಂದು ಗಾಂಜಾ ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ವೈದ್ಯರು, ಮಹಿಳಾ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 10 ಮಂದಿಯನ್ನು ಬಂಧಿಸಿದ್ದರು. ಜ.7 ರಂದು ಬಿಡಿಎಸ್ ವಿದ್ಯಾರ್ಥಿ, ಯುಕೆಯ ವಿದ್ಯಾರ್ಥಿ ಇದ್ದ ಫ್ಲ್ಯಾಟ್ ಮೇಲೆ ದಾಳಿ ಮಾಡಿ ಆತನಿಂದ ಎರಡು ಕೆ.ಜಿ ಗಾಂಜಾ, ಆಟಿಕೆ ಪಿಸ್ತೂಲ್, ಎರಡು ಮೊಬೈಲ್ ಫೋನ್ ಮತ್ತು ಡಿಜಿಟಲ್ ತೂಕ ಮಾಪನ ವಶಪಡಿಸಿಕೊಂಡಿದ್ದರು. ಆಗ ಆರೋಪಿಗಳನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಸೇವನೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದನ್ನು ಆಧಾರಿಸಿ ಪೊಲೀಸರು ದಾಳಿ ನಡೆಸಿ ಮತ್ತೆ 9 ಮಂದಿಯನ್ನು ಬಂಧಿಸಿದ್ದರು.
ಇಬ್ಬರು ವೈದ್ಯರು, 7 ಮಂದಿ ವಿದ್ಯಾರ್ಥಿಗಳು: ಬಂಧಿತ 9 ಮಂದಿಯಲ್ಲಿ ಇಬ್ಬರು ವೈದ್ಯರಾಗಿದ್ದು, ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಇವರಲ್ಲಿ ನಾಲ್ಕು ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಇವರು ಪ್ರಮುಖ ಡ್ರಗ್ ಪೆಡ್ಲರ್ ನೀಲ್ನಿಂದ ಗಾಂಜಾವನ್ನು ಪಡೆದು ಸೇವನೆ ಮತ್ತು ಮಾರಾಟ ಮಾಡುತ್ತಿದ್ದರು. ಇವರನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆರೋಪಿಗಳು ಗಾಂಜಾ ಸೇವನೆ ಮಾಡಿದ್ದು, ಇವರಲ್ಲಿ ಯಾರು ಯಾರು ಪೆಡ್ಲರ್ ಆಗಿದ್ದವರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇವರು ಮಂಗಳೂರಿನ ವಿವಿಧ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು.
ಜನವರಿ 12ರಂದು ಮೂವರು ಸೆರೆ: ವೈದ್ಯಕೀಯ ವಿದ್ಯಾರ್ಥಿಗಳಾದ ಕರಾವಳಿ ಕಾಲೇಜಿನ ಫಾರ್ಮಾ ಡಿ ವಿದ್ಯಾರ್ಥಿ ಕೇರಳದ ಕೊಚ್ಚಿನ್ನ ಅಡೋನ್ ದೇವ್, ಕೆಎಂಸಿಯ ಅಂತಿಮ ವರ್ಷದ ಪೆಥೊಲಜಿ ಎಂಡಿ ವಿದ್ಯಾರ್ಥಿ ತುಮಕೂರಿನ ಹರ್ಷ ಕುಮಾರ್ ಮತ್ತು ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ಕಸಬ ಬೆಂಗ್ರೆಯ ಮೊಹಮ್ಮದ್ ಅಫ್ರಾರ್ (23) ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಜನವರಿ 12ರಂದು ಬಂಧಿಸಿದ್ದರು. ಈ ಪ್ರಕರಣದಲ್ಲಿ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ 13 ಮಂದಿಯನ್ನು ಈಗಾಗಲೇ ಬಂಧಿಸಲಾಗಿತ್ತು. ಅಪಾರ್ಟ್ಮೆಂಟ್ ಹಾಗೂ ಪಿಜಿಗಳನ್ನು ಬಾಡಿಗೆ ನೀಡುವ ಮಾಲೀಕರುಗಳು ತಾವು ಬಾಡಿಗೆಗೆ ನೀಡಿದ ಮನೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಗಮನಿಸಬೇಕು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಗಾಂಜಾ: ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಮೂವರ ಬಂಧನ