ಮಂಗಳೂರು: ದ.ಕ.ಜಿಲ್ಲೆಯ ವೃದ್ಧರಿಬ್ಬರ ಕೋವಿಡ್-19 ಸೋಂಕು ವೈದ್ಯರಿಗೆ ಸವಾಲಾಗಿ ಪರಿಣಮಿಸಿದ್ದು, ಆರು ಬಾರಿ ಗಂಟಲು ದ್ರವ ತಪಾಸಣೆ ಮಾಡಿದರೂ ಪಾಸಿಟಿವ್ ಕಾಣಿಸುತ್ತಿದೆ. ಹೀಗಾಗಿ ಅವರು ತಿಂಗಳಾದರೂ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿಲ್ಲ.
'ವಂದೇ ಭಾರತ್ ಮಿಷನ್'ನಡಿ ಮೇ 12ರಂದು ಮೊದಲ ಅಂತಾರಾಷ್ಟ್ರೀಯ ವಿಮಾನದಲ್ಲಿ ದುಬೈಯಿಂದ ಮಂಗಳೂರಿಗೆ ಬಂದಿರುವ 81 ವರ್ಷದ ವಯೋವೃದ್ಧರು ಆ ಬಳಿಕ ಕ್ವಾರೆಂಟೈನ್ನಲ್ಲಿದ್ದಾರೆ. ಆದರೆ, ಇನ್ನೂ ಅವರು ಸೋಂಕಿನಿಂದ ಗುಣಮುಖರಾಗಿಲ್ಲ. ಕ್ವಾರೆಂಟೈನ್ನಲ್ಲಿದ್ದ ಅವರ ಪತ್ನಿ ಹಾಗೂ ಪುತ್ರಿ ಗುಣಮುಖರಾಗಿ ಮನೆ ಸೇರಿದ್ದಾರೆ. ಮೇಲ್ನೋಟಕ್ಕೆ ಆರೋಗ್ಯವಂತರಾಗಿರುವ ಇವರ ಗಂಟಲು ದ್ರವ ತಪಾಸಣೆ ಆರು ಬಾರಿ ಮಾಡಿದರೂ ಸೋಂಕು ಇದೆ ಎಂದು ಕಾಣಿಸಿಕೊಳ್ಳುತ್ತಿದೆ.
ಮತ್ತೊಬ್ಬ 76 ವರ್ಷದ ವೃದ್ಧರು ತಮ್ಮ ಪತ್ನಿಯೊಂದಿಗೆ ದುಬೈಯಲ್ಲಿರುವ ಮಗಳ ಮನೆಗೆ ತೆರಳಿದ್ದು, ಅಲ್ಲಿ ಅಳಿಯ ಹಾಗೂ ಪುತ್ರಿಯಲ್ಲಿ ಸೋಂಕು ಪತ್ತೆಯಾಗಿತ್ತು. ಅವರು ಗುಣಮುಖರಾಗಿದ್ದಾರೆ. ಈ ವೃದ್ಧ ದಂಪತಿ ಮೇ 18ರಂದು ಮಂಗಳೂರಿಗೆ ಆಗಮಿಸಿದ್ದರು. ಆದರೆ, ಕ್ವಾರೆಂಟೈನ್ನಲ್ಲಿದ್ದ ಅವರ ಪತ್ನಿ ನೆಗೆಟಿವ್ ಬಂದು ಮನೆ ಸೇರಿದ್ದಾರೆ. ಪಾಸಿಟಿವ್ ಬಂದಿರುವ ಈ ವೃದ್ಧರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರು ಬಾರಿ ಕೋವಿಡ್ ಸೋಂಕು ತಪಾಸಣೆ ಮಾಡಿದಾಗಲೂ ಪಾಸಿಟಿವ್ ಕಾಣಿಸುತ್ತಿದೆ.
ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿರುವ ಇವರು ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಕುಟುಂಬಸ್ಥರಿಗೆ ಕರೆ ಮಾಡಿ ಒಂದು ಸಲ ಮನೆಗೆ ಕರೆದುಕೊಂಡು ಹೋಗಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿಯೇ ಇದ್ದ ಇವರು ಮಾನಸಿಕ ಒತ್ತಡಕ್ಕೆ ಒಳಗಾಗಿ ನಿದ್ದೆ ಬಾರದೇ ಮಾತ್ರೆ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಸೋಂಕು ನೆಗೆಟಿವ್ ಬಾರದೇ ಮನೆಗೆ ಕಳುಹಿಸಲಾಗದೇ ವೈದ್ಯರು ಅಸಹಾಯಕರಾಗಿದ್ದಾರೆ.