ಮಂಗಳೂರು: ಇತ್ತೀಚೆಗೆ ಇಬ್ಬರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದ ಪೊಲೀಸರು, ಇದೇ ಪ್ರಕರಣದ ಬೆನ್ನು ಹತ್ತಿ ಮತ್ತಿಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನೈಜೀರಿಯಾ ಪ್ರಜೆಗಳು ಹಾಗೂ ಕಾಸರಗೋಡು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ತನಿಖೆಯ ಸಂದರ್ಭದಲ್ಲಿ ಇವರು ನೀಡಿರುವ ಮಾಹಿತಿ ಮೇರೆಗೆ ಬೆಂಗಳೂರಿಗೆ ತೆರಳಿ ಅಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 55ಗ್ರಾಂ ಎಂಡಿಎಂಎ ಹಾಗೂ ಎಂಡಿಎಂಎ ಸಾಗಾಟಕ್ಕೆ ಬಳಸಿರುವ ಮಾರುತಿ ಸ್ವಿಫ್ಟ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಡಿಸಿಪಿ ಹರಿರಾಂ ಶಂಕರ್ ಮಾತನಾಡಿ, ಇದೊಂದು ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಪೆಡ್ಲಿಂಗ್ ಜಾಲವಾಗಿದ್ದು, ಇವರು ಕರ್ನಾಟಕ, ಕೇರಳ ಇತರ ರಾಜ್ಯಗಳಲ್ಲೂ ಮಾದಕ ವಸ್ತು ಮಾರಾಟದ ಬೃಹತ್ ಜಾಲವನ್ನು ಹೊಂದಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರು ನೈಜೀರಿಯಾ ಪ್ರಜೆಗಳ ಸಹಿತ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಎಸಿಪಿ ರಂಜಿತ್ ಬಂಡೂರು ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ತಂಡ ವಿದೇಶಕ್ಕೂ ತೆರಳಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ ಎಂದು ತಿಳಿಸಿದರು.