ಮಂಗಳೂರು: ಕೊರೊನಾ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಎರಡು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ನಗರದ ಮುಲ್ಕಿ ಠಾಣೆ ಮತ್ತು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿ ಈ ಎರಡೂ ಪ್ರಕರಣಗಳು ನಡೆದಿದೆ. ಮುಲ್ಕಿಯಲ್ಲಿ ಅಂಗಡಿಯೊಂದರ ಬಳಿ ಬೈಕ್ ನಿಲ್ಲಿಸಿದ ಯುವಕನೊಬ್ಬ ಅಂಗಡಿಯಲ್ಲಿದ್ದ ಯುವತಿಯ ಸರ ಎಳೆದೊಯ್ದ ಘಟನೆ ನಡೆದಿತ್ತು. ಅದಾದ ಕೆಲವೇ ದಿನಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು.
ವಿಟ್ಲದಲ್ಲಿ ಮನೆಯ ಸಮೀಪ ನಿಂತಿದ್ದ ಮಹಿಳೆಯೋರ್ವರ ಸರ ಎಳೆದೊಯ್ಯಲಾಗಿತ್ತು. ಘಟನೆ ನಡೆದ ಮೂರೇ ದಿನದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆಗೆ ಹೋಲಿಸಿದರೆ ಸರಗಳ್ಳತನ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ ಎಂದು ಆಯುಕ್ತರು ಹೇಳಿದ್ದಾರೆ.