ಮಂಗಳೂರು: ಇತ್ತೀಚೆಗೆ ಆರೋಪಿಗಳು ಪೊಲೀಸರ ಮೇಲೆ ನೈತಿಕ ಪೊಲೀಸ್ ಗಿರಿ ನಡೆದ ಬೆನ್ನಲ್ಲೇ ಮಾಧ್ಯಮವೊಂದರ ವರದಿಗಾರನ ಮೇಲೂ ನೈತಿಕ ಪೊಲೀಸ್ ಗಿರಿ ನಡೆದಿದೆ. ಈ ಘಟನೆ ನಗರದ ಕಾವೂರು ಬಳಿಯ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ.
ಮಂಗಳೂರಿನ ಸ್ಥಳೀಯ ಖಾಸಗಿ ನ್ಯೂಸ್ ವೆಬ್ಸೈಟ್ ವರದಿಗಾರನ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದ್ದು, ತಕ್ಷಣ ವರದಿಗಾರ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆ ಎಫ್ಐಆರ್ ದಾಖಲಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋಟೇಕಾರು ನಿವಾಸಿ ಚೇತನ್ (37) ಹಾಗೂ ಯೆಯ್ಯಾಡಿ ನಿವಾಸಿ ನವೀನ್ (43) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಜುಲೈ 28ರ ರಾತ್ರಿ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಇಂದು ಬಂಧಿಸಿದ್ದಾರೆ. ತಮ್ಮ ಸ್ನೇಹಿತೆಯೊಂದಿಗೆ ವರದಿಗಾರರೊಬ್ಬರು ಮಂಗಳೂರಿನ ಕಾವೂರು ಬಳಿಯ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಾಸ್ ಬರುತ್ತಿದ್ದ ವೇಳೆ ನಿಲ್ಲಿಸಿದ ಇಬ್ಬರು ಯುವಕರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೆ ಅನ್ಯಧರ್ಮದ ಯುವಕನೆಂದು ತಿಳಿದು ಹಲ್ಲೆಗೆ ಯತ್ನಿಸಿದ್ದಾರೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ಸಂತ್ರಸ್ತ ಯುವಕ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಓದಿ: ಮಂಗಳೂರು ನೈತಿಕ ಪೊಲೀಸ್ ಗಿರಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಪೊಲೀಸ್ ಕಾನ್ಸ್ಟೇಬಲ್ ಮೇಲೆ ನೈತಿಕ ಪೊಲೀಸ್ ಗಿರಿ: ಪೊಲೀಸ್ ಮೇಲೆಯೇ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಕೇಳಿ ಬಂದಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ತುಂಬೆ ನಿವಾಸಿಗಳಾದ ಮನೀಷ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಬಿ.ಸಿ ರೋಡ್ ನಿವಾಸಿಯಾಗಿರುವ ಪೊಲೀಸ್ ಸಿಬ್ಬಂದಿ ತನ್ನ ಪತ್ನಿಯ ಜೊತೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಅವರ ಮೇಲೆ ನೈತಿಕ ಪೊಲೀಸ್ ಗಿರಿ ಮಾಡಿದ್ದಾಗಿ ಆಪಾದಿಸಲಾಗಿದೆ. ಹೀಗಾಗಿ ಅವರಿಬ್ಬರನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಘಟನೆಯ ವಿವರ: ಪೊಲೀಸ್ ಸಿಬಂದಿಯೊಬ್ಬರು ಬಿ.ಸಿ ರೋಡ್ನಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ತಂಗಿದ್ದಾರೆ. ಅವರು ತನ್ನ ಪತ್ನಿ ಮತ್ತು ಸಂಬಂಧಿ ಜೊತೆ ಬಿ.ಸಿ.ರೋಡ್ನ ಹೋಟೆಲ್ ಒಂದಕ್ಕೆ ಊಟಕ್ಕೆ ಜುಲೈ 27ರಂದು ರಾತ್ರಿ ಹೋಗಿದ್ದರು. ಬಳಿಕ ಅಲ್ಲಿಂದ ನಡೆದುಕೊಂಡು ಮನೆಗೆ ಬರುವ ವೇಳೆ ವೈನ್ ಶಾಪ್ ಮುಂಭಾಗದಲ್ಲಿದ್ದ ಇಬ್ಬರು ಯುವಕರು ಇವರನ್ನು ಗಮನಿಸಿ, ಹಿಂಬಾಲಿಸಿಕೊಂಡು ಬಂದಿದ್ದಾರೆ.
ಪೊಲೀಸ್ ಸಿಬಂದಿ ಕುಟುಂಬವನ್ನು ಮನೆಗೆ ಮುಟ್ಟಿಸಿ ಬಳಿಕ ಮತ್ತೆ ಕೇಸ್ ಒಂದರ ವಿಚಾರಕ್ಕೆ ಮನೆಯಿಂದ ಹೊರಕ್ಕೆ ಹೊರಡುತ್ತಿದ್ದಂತೆ, ಅವರನ್ನು ಅಡ್ಡಗಟ್ಟಿ ನಿನಗೆ ಯುವತಿಯರೊಂದಿಗೆ ಏನು ಕೆಲಸ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಾನು ಬಿ ಸಿ ರೋಡ್ನ ಪೊಲೀಸ್ ಮತ್ತು ನನ್ನ ಜೊತೆಯಲ್ಲಿದ್ದವರು ನನ್ನ ಪತ್ನಿ ಮತ್ತು ನಾದಿನಿ ಎಂದು ಪೊಲೀಸ್ ಸಿಬ್ಬಂದಿ ಅವರಿಗೆ ತಿಳಿ ಹೇಳಿದ್ದಾರೆ.
ಆರೋಪಿಗಳು ಅವರ ಮಾತನ್ನು ಕೇಳದೇ, ನೀನು ಪೊಲೀಸ್ ಅಲ್ಲ. ಅವಳು ನಿನ್ನ ಪತ್ನಿಯೂ ಅಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿ ಅಲ್ಲಿಗೆ ಬಂದ ಪತ್ನಿ ಮೇಲೆಯೂ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಸರ್ಕಾರಿ ಕರ್ತವ್ಯದ ಮೇಲೆ ಹೋಗುತ್ತಿದ್ದಾಗ ಅಡ್ಡಿಪಡಿಸಿದ ಆರೋಪದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಪ್ರಕರಣ ತನಿಖೆ ಮುಂದುವರಿದಿದೆ.