ಬಂಟ್ವಾಳ : ಮಂಗಳೂರಿನ ವಿಮಾನ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಮೋದಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ತಲುಪುವಂತೆ ಮಾಡಲು ಸೆ.15ರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಟ್ವಿಟ್ಟರ್ ಅಭಿಯಾನವೊಂದನ್ನು ನಡೆಸಲಾಗುತ್ತದೆ. ಈ ಕುರಿತು ಈಗಾಗಲೇ ಸಮಾನ ಮನಸ್ಕರ ತಂಡವೊಂದು ವಾಟ್ಸಾಪ್ ಗುಂಪೊಂದನ್ನು ರಚಿಸಿದೆ. ಫ್ಲೈಫ್ರಂಐಎಕ್ಸ್ಇ ಎಂದು ಹ್ಯಾಶ್ ಟ್ಯಾಗ್ನೊಂದಿಗೆ ಆಂಗ್ಲ ಪದದಲ್ಲಿ ಬರೆದು, ವಿಮಾನ ನಿಲ್ದಾಣಕ್ಕೆ ಹೆಚ್ಚು ವಿಮಾನ ಬರುವಂತಾಗುವ ಅಗತ್ಯಗಳು ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ವಿವರಿಸಿ ಟ್ವೀಟ್ ಮಾಡಬೇಕು ಎಂದು ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವರಿಗೆ ಟ್ವೀಟ್ ಮಾಡಬೇಕಾಗುತ್ತದೆ ಎಂದು ಹೇಳಿದೆ. ಮಂಗಳೂರು, ಬಂಟ್ವಾಳ, ಪುತ್ತೂರು ಸಹಿತ ಹಲವು ಪ್ರದೇಶಗಳ ಯುವಕರು ಈ ಗುಂಪಿನಲ್ಲಿದ್ದಾರೆ. ಪುತ್ತೂರಿನ 18ರ ಹರೆಯದ ಯುವಕ ಶ್ರೀಕರ ಇದರ ರೂವಾರಿಗಳಲ್ಲೊಬ್ಬರು. ಇವರಂತೆ ಬೇರೆ ಬೇರೆ ಭಾಗಗಳ ಯುವಕರು, ಹಿರಿಯರು ಟ್ವೀಟ್ನ ಅಗತ್ಯಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಜನಸಾಮಾನ್ಯರಿಗೂ ಒದಗಬಹುದಾದ ಲಾಭಗಳನ್ನು ಪಾಯಿಂಟ್ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಸೆ.15ರಂದು ಬೆಳಗ್ಗಿನಿಂದ ಸಂಜೆವರೆಗೆ ಸತತ ಟ್ವೀಟ್ ಮಾಡುವುದರ ಮೂಲಕ ಟ್ವಿಟ್ಟರ್ನಲ್ಲಿ ಜನಪ್ರಿಯಗೊಳಿಸಿ, ಪ್ರಧಾನಿಯನ್ನು ತಲುಪುವುದು ಇವರ ಉದ್ದೇಶ.
ಮಂಗಳೂರಿನಿಂದ ನವ ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಗುವಾಹಟಿ, ಪುಣೆ, ಬೆಳಗಾವಿ, ಜಮ್ಮು, ವಿಶಾಖಪಟ್ಟಣಂ, ತಿರುವನಂತಪುರಂ, ಅಗಟ್ಟಿ, ಪೋರ್ಟ್ಬ್ಲೇರ್, ಮೈಸೂರು, ಸಿಂಗಾಪುರ, ಬ್ಯಾಂಕಾಕ್ ಮುಂತಾದ ನಗರಗಳಿಗೆ ವಿಮಾನ ಸೇವೆಗಳನ್ನು ಪ್ರಾರಂಭಿಸಲು ಒತ್ತಾಯಿಸಿ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಉಡಾನ್ ಯೋಜನೆಯಡಿ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಸಾರ್ವಜನಿಕರು ಟ್ವೀಟ್ ಮಾಡಬೇಕು. ವಿಮಾನದಲ್ಲಿ ಹೋಗುವವರಷ್ಟೇ ಅಲ್ಲ, ಹೋಗದವರಿಗೂ ನಿಲ್ದಾಣ ಅಭಿವೃದ್ಧಿಯಾದರೆ ಲಾಭವಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿರುವವರಿಗೆ ಮಂಗಳೂರು ವಿಮಾನ ನಿಲ್ದಾಣ ಅನುಕೂಲಕರ ಎಂದು ಅಭಿಯಾನದ ಆಯೋಜಕರು ತಿಳಿಸಿದ್ದಾರೆ.
ಏನಿದು #FlyFromIXE ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟಾರೆ ಅಭಿವೃದ್ಧಿಗಾಗಿ ಟ್ವಿಟರ್ ಅಭಿಯಾನದ ಹ್ಯಾಶ್ ಟ್ಯಾಗ್ ಇದು. ಸೆಪ್ಟೆಂಬರ್ 15 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ #FlyFromIXE ಹ್ಯಾಶ್ ಟ್ಯಾಗ್ನೊಂದಿಗೆ ಟ್ವೀಟ್ ಮಾಡಬೇಕು.
ಪ್ರಧಾನಿ @narendramodi, ನಾಗರಿಕ ವಿಮಾನಯಾನ ಸಚಿವಾಲಯದ ಟ್ವೀಟರ್ ಖಾತೆ @MoCAGoI, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪೂರಿ @HardeepSPuri, ವಿಮಾನ ನಿಲ್ದಾಣ ಪ್ರಾಧಿಕಾರ @AAIOfficial ಗೆ ಟ್ವೀಟ್ ಮಾಡಬಹುದು.