ಮಂಗಳೂರು: ಅನ್ಯಮತೀಯ ಯುವತಿ(22) ಯನ್ನು 62ರ ವೃದ್ಧ ಉದ್ಯಮಿಯೋರ್ವರು ವಿವಾಹವಾಗಿರುವ ಪ್ರಕರಣವೊಂದು ಇತ್ತೀಚೆಗೆ ಲವ್ ಜಿಹಾದ್ ಆರೋಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬೋಳಾರ ನಿವಾಸಿ ಬಿ.ಎಸ್.ಗಂಗಾಧರ್ (62) ಎಂಬಾತ ಬಂಧಿತ ಆರೋಪಿ. ತರಕಾರಿ ಉದ್ಯಮಿಯಾಗಿರುವ ಆರೋಪಿ ಗಂಗಾಧರ್ ಯುವತಿಯೋರ್ವಳನ್ನು ವಿವಾಹವಾಗಿರುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅಲ್ಲದೆ ಆರೋಪಿಯ ಮೊದಲ ಪತ್ನಿ, 'ದುಷ್ಕರ್ಮಿಗಳು ಬಲವಂತವಾಗಿ ತನ್ನ ಗಂಡನನ್ನು ಅಪಹರಿಸಿ ಅಕ್ರಮವಾಗಿ ಬಂಧನದಲ್ಲಿರಿಸಿ ಲವ್ ಜಿಹಾದ್ ನಡೆಸಿ ಅನ್ಯಮತೀಯ ಯುವತಿಯೊಂದಿಗೆ ವಿವಾಹ ಮಾಡಿಸಿದ್ದಾರೆ' ಎಂದು ಆರೋಪಿಸಿ ಮಂಗಳೂರು ದಕ್ಷಿಣ (ಕದ್ರಿ) ಠಾಣೆಯಲ್ಲಿ ದೂರು ನೀಡಿದ್ದರು.
ಇದರ ಬೆನ್ನಲ್ಲೇ ಉದ್ಯಮಿ ಗಂಗಾಧರ್ ವಿವಾಹವಾಗಿರುವ ಯುವತಿಯೇ ಆತನ ವಿರುದ್ಧವೇ ಅತ್ಯಾಚಾರ ಪ್ರಕರಣ ದಾಖಲಿಸುವ ಮೂಲಕ ಪ್ರಕರಣ ಸಂಪೂರ್ಣ ಟ್ವಿಸ್ಟ್ ಪಡೆದಿದೆ. 'ಆರೋಪಿ ಗಂಗಾಧರ್ ತನ್ನ ಹೆಸರು ಬದಲಾಯಿಸಿದ್ದಾಗಿ ತನ್ನಲ್ಲಿ ಹೇಳಿದ್ದು, ತನಗೆ ಈವರೆಗೆ ಮದುವೆಯಾಗಿಲ್ಲ. ತಾನು ಅನ್ಯ ಧಾರ್ಮಿಕ ಸಮುದಾಯಕ್ಕೆ ಸೇರಿದವನಾಗಿದ್ದರೂ, ತಮ್ಮ ಸಮುದಾಯದಿಂದ ದೂರ ಉಳಿದು ಒಬ್ಬಂಟಿಯಾಗಿದ್ದೇನೆ ಎಂದು ತನ್ನ ಸ್ನೇಹಿತರೊಂದಿಗೆ ಸೇರಿ ನನ್ನ ನಂಬಿಸಿ ಮದುವೆಯಾಗಿದ್ದಾನೆ. ಬಳಿಕ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಾನೆ. ನಾನು ಗರ್ಭಿಣಿಯಾದ ಬಳಿಕ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ. ಆದ್ರೆ ಆತನಿಗೆ ಈಗಾಗಲೇ ಎರಡು ಮದುವೆಯಾಗಿ ಐದಾರು ಮಕ್ಕಳಿವೆ. ಆತ ಆ ಸಮುದಾಯದವನೂ ಅಲ್ಲ ಎಂದು ತಿಳಿದು ಬಂದಿದೆ' ಎಂದು ದೂರಿನಲ್ಲಿ ಯುವತಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಣ್ಮಕ್ಕಳನ್ನು ಛೂ ಬಿಟ್ಟು ಲವ್ ಜಿಹಾದ್ ಆರೋಪ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ!
ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಗಂಗಾಧರ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ಬಗ್ಗೆ ತನಿಖೆ ನಡೆಸಿದಾಗ ಗಂಗಾಧರನಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಐದಾರು ಮಕ್ಕಳಿವೆ ಎಂಬ ಸತ್ಯ ಬಯಲಾಗಿದೆ. ಅಲ್ಲದೇ ಇದೀಗ ಮದುವೆಯಾಗಿರುವ ಯುವತಿಗೂ ಮದುವೆಯಾಗಿ ಪತಿ ಮೃತಪಟ್ಟಿದ್ದು, ಒಂದು ಮಗು ಇದೆ. ಆಕೆಯ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಆರೋಪಿ ಗಂಗಾಧರ್ ಮದುವೆಯಾಗಿದ್ದಾನೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಈ ಪ್ರಕರಣದಲ್ಲಿ ಹಿಂದೆ ಅಪಹರಣ ಪ್ರಕರಣ ದಾಖಲಾಗಿದ್ದು, ಅದು ಸುಳ್ಳು. ಇದೀಗ ಯುವತಿಯ ದೂರಿನ ಆಧಾರದಲ್ಲಿ ನಾವು ಆರೋಪಿಯನ್ನು ವಶಪಡಿಸಿಕೊಂಡಿದ್ದು, ಇದೇ ರೀತಿ ವಂಚನೆಗೊಳಗಾದವರು ಯಾರಾದರೂ ಇದ್ದಲ್ಲಿ ದೂರು ನೀಡಿದರೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.