ಮಂಗಳೂರು : ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಅಧಿಕೃತ ರಾಜ್ಯ ಭಾಷೆಯಾಗಿ ಘೋಷಣೆ ಮಾಡಬೇಕೆಂಬ ಕೂಗು ಬಹಳಷ್ಟು ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ 'ಪ್ರತ್ಯೇಕ ತುಳುರಾಜ್ಯ'ವಾಗಲಿ ಎಂಬ ಬೇಡಿಕೆ ಗರಿಗೆದರಿದ್ದು, ಇದಕ್ಕಾಗಿ ಟ್ವೀಟ್ ಅಭಿಯಾನ ನಡೆದಿದೆ.
ಕರ್ನಾಟಕ ರಾಜ್ಯ ರಚನೆಯಾಗಿ 64 ವರ್ಷಗಳು ಕಳೆದರೂ, ತುಳುಭಾಷೆಗೆ ಈವರೆಗೆ ಅಧಿಕೃತ ಸ್ಥಾನಮಾನ ದೊರಕಿಲ್ಲ. ಇಷ್ಟರವರೆಗೆ ರಾಜ್ಯವನ್ನು ಆಳಿರುವ ಸರ್ಕಾರಗಳ ನಿರ್ಲಕ್ಷ್ಯತನವನ್ನು ಖಂಡಿಸಿ ತುಳುಭಾಷೆಯನ್ನು ಮಾಡನಾಡುವ ಜನರಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿಸಿ ಪ್ರತ್ಯೇಕ ತುಳುನಾಡು ರಾಜ್ಯ ಸ್ಥಾಪನೆಗೆ ಹಕ್ಕೊತ್ತಾಯ ಕೇಳಿ ಬಂದಿದೆ.
ಈ ಹಿನ್ನೆಲೆ ತುಳುವಿಗೆ ಸ್ಥಾನಮಾನ ದೊರಕಬೇಕು, ತುಳು ರಾಜ್ಯ ಆಗಬೇಕು, ತುಳು ಭಾಷೆಯ ಮೇಲೆ ಕನ್ನಡ ಹೇರಿಕೆ ನಿಲ್ಲಬೇಕು ಎಂಬ ಉದ್ದೇಶದಿಂದ #StopKannadaImposition, #SaveTuluFirst, #TulunaduState ಎಂಬ ಹ್ಯಾಶ್ಟ್ಯಾಗ್ನೊಂದಿಗೆ 'ಟ್ವೀಟ್ ತುಳುನಾಡು ಕ್ಯಾಂಪೇನ್' ಎಂಬ ಹಕ್ಕೊತ್ತಾಯ ಕೇಳಿ ಬಂತು. ತುಳು ಭಾಷೆಯ ಉಳಿವಿಗಾಗಿ ಹೋರಾಡುವ ಎಲ್ಲಾ ತುಳು ಸಂಘಟನೆಗಳ ಬೆಂಬಲದೊಂದಿಗೆ ಭಾನುವಾರ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಈ ಟ್ವೀಟ್ ಅಭಿಯಾನ ನಡೆಯಿತು.
ಓದಿ : ಕ್ರಿಕೆಟ್ ಸ್ಟೇಡಿಯಂಗಾಗಿ ನಾಯಕರ ಮುಸುಕಿನ ಗುದ್ದಾಟ.. ಸ್ಥಳ ನಿಗದಿಗಾಗಿ ದಶಕಗಳ ಕಿತ್ತಾಟ
ಟ್ವೀಟ್ ಅಭಿಯಾನದಲ್ಲಿ 'ಪ್ರತ್ಯೇಕ ತುಳುರಾಜ್ಯ'ದ ಕೂಗಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಟ್ರೆಂಡಿಂಗ್ನಲ್ಲಿ ಕಂಡು ಬಂದಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನದವರೆಗೆ 11,900 ಮಂದಿ ಟ್ವೀಟ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರೆ, ಮಧ್ಯರಾತ್ರಿ 12ರ ವೇಳೆಗೆ 30 ಸಾವಿರ ಮಂದಿ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ತುಳುಭಾಷೆಗೆ ಸ್ಥಾನಮಾನಗಳು ಸಲ್ಲಬೇಕು, ಅಧಿಕೃತ ರಾಜ್ಯಭಾಷೆಯಾಗಿ ಘೋಷಣೆಯಾಗಬೇಕೆಂಬ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿದ್ದರೂ, ಯಾವುದೇ ಸರ್ಕಾರಗಳು ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ.
ತುಳು ಸಾಹಿತ್ಯ ಅಕಾಡೆಮಿಗೂ ಸರಿಯಾಗಿ ಯಾವುದೇ ರೀತಿಯ ಅನುದಾನಗಳು ಬರುತ್ತಿಲ್ಲ. ಈ ನಿಟ್ಟಿನಲ್ಲಿ ತುಳು ಸಂಘಟನೆಗಳು ಸೇರಿ ಟ್ವೀಟ್ ಅಭಿಯಾನ ನಡೆಸಿವೆ. ಇದಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಈ ಮೂಲಕ ತುಳುವಿಗೆ ಅಧಿಕೃತ ಸ್ಥಾನಮಾನವನ್ನು ನೀಡಬೇಕೆಂದು ರಾಜ್ಯ ಸರ್ಕಾರದ ಮುಂದೆ ಹಕ್ಕೊತ್ತಾಯ ಮಾಡಿದ್ದೇವೆ ಎಂದು ಹೇಳಿದರು.