ಮಂಗಳೂರು: ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಪ್ರಾಚೀನ ಭಾಷೆಯಾದ ತುಳುಭಾಷೆಯ ಮೊದಲ ಆನ್ಲೈನ್ ನಿಘಂಟು 'ಕೊಪ್ಪರಿಗೆ' ಇಂದಿನಿಂದ ಆನ್ಲೈನ್ನಲ್ಲಿ ಲಭ್ಯವಾಗಲಿದೆ. ವಿಶೇಷವೆಂದರೆ ತುಳು ಲಿಪಿಯಲ್ಲಿಯೇ, ತುಳು ಉಚ್ಚಾರವನ್ನು(Pronouncing) ತಿಳಿಸುವ ನಿಘಂಟೊಂದು ಇದೇ ಮೊದಲ ಬಾರಿಗೆ ರಚನೆಯಾಗಿದೆ.
ಕನ್ನಡ ಲಿಪಿಯಲ್ಲಿಯೂ ಲಭ್ಯ: 'ಜೈ ತುಳುನಾಡು' ಸಂಘಟನೆಯ ಮುತುವರ್ಜಿಯಿಂದ ತಯಾರಾಗಿರುವ ಈ ನಿಘಂಟಿನಲ್ಲಿ ಪ್ರಸ್ತುತ ತುಳುಭಾಷೆಯ 1,200 ಪದಗಳಿಗೆ ಅರ್ಥಗಳು ದೊರೆಯಲಿವೆ. ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಪದಗಳು ಸೇರ್ಪಡೆಯಾಗಲಿವೆ. ಇಲ್ಲಿ ಶಬ್ದಗಳು ತುಳುಲಿಪಿಯಲ್ಲಿ ಮಾತ್ರವಲ್ಲದೆ ಕನ್ನಡ ಲಿಪಿಯಲ್ಲಿಯೂ ಲಭ್ಯವಿರುತ್ತದೆ.
ತುಳು ಶಬ್ದಗಳಿಗೆ ಅರ್ಥ: ಅರ್ಥವಿವರಣೆಯು ಚಿತ್ರ ಸಹಿತ ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ದೊರೆಯಲಿದೆ. ಅದೇ ರೀತಿ ತುಳು ಪದಗಳಿಗೆ ಉಚ್ಚಾರ ಮಾಡುವ ಕ್ರಮವನ್ನೂ ತಿಳಿಸಲಾಗಿದೆ. ಈ ಮೂಲಕ ಈ ನಿಘಂಟು ಬರೀ ಅರ್ಥಕೋಶ ಮಾತ್ರವಲ್ಲದೆ, ಪ್ರನೋನ್ಸಿಂಗ್ ಡಿಕ್ಷನರಿಯಾಗಿಯೂ ಬಳಕೆಯಾಗಲಿದೆ. ಕರಾವಳಿಯ ಜನತೆ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಇರುವವರೂ ಈ ನಿಘಂಟಿನ ಮೂಲ ಸುಲಭವಾಗಿ ತುಳು ಶಬ್ದಗಳಿಗೆ ಅರ್ಥ ಹುಡುಕಬಹುದು.
ಆನ್ಲೈನ್ ಮೂಲಕ ಲಭ್ಯ: ಕೊಪ್ಪರಿಗೆ ನಿಘಂಟು ತಯಾರು ಮಾಡಿರುವ ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಸಾಧಾರಣ ಆರು ತಿಂಗಳಿನಿಂದ ಆನ್ಲೈನ್ ತುಳು ಡಿಕ್ಷನರಿಯ ಕಾರ್ಯ ನಡೆಯುತ್ತಿದ್ದು, ಒಂದು ತಿಂಗಳಿನಿಂದ ವೇಗ ದೊರಕಿದ್ದು ಇಂದು ಆನ್ಲೈನ್ ಮೂಲಕ ಲಭ್ಯವಾಗಲಿದೆ. ಜೈ ತುಳುನಾಡು ಸಂಘಟನೆಯ ಎಲ್ಲಾ ಸದಸ್ಯರು ಈ ನಿಘಂಟು ರಚನಾ ಕಾರ್ಯದಲ್ಲಿ ಬಹಳಷ್ಟು ಮುತುವರ್ಜಿ ವಹಿಸಿದ್ದಾರೆ. ಅಲ್ಲದೆ ಆ್ಯಪ್ ಅಭಿವೃದ್ಧಿ ಮಾಡಿರುವ ಸುಮಂತ್ ಹೆಬ್ರಿಯವರು ಇದಕ್ಕಾಗಿ ಹೆಚ್ಚಿನ ಒತ್ತುನೀಡಿ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಪದಗಳಿಗೆ ಅರ್ಥ ಸೇರಿಸುವ ಅವಕಾಶ: ಈ ಆ್ಯಪ್ನ್ನು www.jaitulunadu.in ಎನ್ನುವ ವೆಬ್ಸೈಟ್ಗೆ ಹೋಗಿ ಗೂಗಲ್ ಐಡಿಯಲ್ಲಿ ಲಾಗ್ ಇನ್ ಆದಲ್ಲಿ ಕೊಪ್ಪರಿಗೆ ಆನ್ಲೈನ್ ನಿಘಂಟು ದೊರೆಯುತ್ತದೆ. ಪುರಾತನ ಕಾಲದಲ್ಲಿ ಬಳಸುತ್ತಿದ್ದ ತುಳು ಪದಗಳಿಗೆ ಹೆಚ್ಚು ಒತ್ತು ನೀಡಿ ಅಂತಹ ಪದಗಳಿಗೆ ಅರ್ಥ ನೀಡುವಂತಹ ಪ್ರಯತ್ನ ಮಾಡಲಾಗಿದೆ. ಅಲ್ಲದೆ ಯಾರಿಗಾದರೂ ತುಳುವಿನ ಪದಗಳಿಗೆ ಅರ್ಥ ತಿಳಿದಿದ್ದು, ಅದನ್ನು ಸೇರಿಸುವಂತಹ ಅವಕಾಶವೂ ಇದೆ. ಈ ಪದಗಳ ಬಗ್ಗೆ ಜೈ ತುಳುನಾಡು ಸಂಘಟನೆಯ ತಂಡ ಪರಿಶೀಲನೆ ನಡೆಸಿ ಅಪ್ಲೋಡ್ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ಎಸ್ಸಿಎಸ್ಪಿ/ಟಿಎಸ್ಪಿ ಯೋಜನೆ ಅನುದಾನ ಎಲ್ಲೂ ಡೈವರ್ಟ್ ಮಾಡಿಲ್ಲ: ಸಿಎಂ ಸ್ಪಷ್ಟನೆ