ಬೆಳ್ತಂಗಡಿ: ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಸ್ ನಿಲ್ದಾಣದ ಕಟ್ಟೆಯಲ್ಲಿ ತುಳುನಾಡ ಬಾವುಟ ಹಾರಿಸಿದ ಘಟನೆ ನಡೆದಿದೆ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ತುಳುನಾಡ ಬಾವುಟ ಕಟ್ಟಿರುವುದು ಕಂಡುಬಂದಿದೆ.
ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗವಿರುವ ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಧ್ವಜಸ್ತಂಭದಲ್ಲಿ ಇಂದು ಬೆಳಗ್ಗೆ ತುಳುನಾಡ ಬಾವುಟವನ್ನು ಹಾರಿಸಲಾಗಿತ್ತು. ಮಧ್ಯಾಹ್ನ 12 ಗಂಟೆಯವರೆಗೂ ತುಳು ಬಾವುಟ ಹಾರಾಡುತ್ತಿರುವುದು ಕಂಡುಬಂತು. ಘಟನೆಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಧ್ವಜವನ್ನು ಇಳಿಸಿ, ಕನ್ನಡದ ಧ್ವಜಾರೋಹಣ ಮಾಡಲಾಗಿದೆ. ಮತ್ತೊಂದೆಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೇಟ್ ಮುಂಭಾಗವೂ ತುಳುನಾಡ ಬಾವುಟವನ್ನು ಕಟ್ಟಿರುವುದು ಕಂಡುಬಂತು. ಈ ಕೃತ್ಯ ಎಸಗಿರುವುದು ಯಾರು? ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಪ್ರತ್ಯೇಕ ತುಳುನಾಡು ಘೋಷಣೆಗೆ ದ.ಕ. ಜಿಲ್ಲೆಯಾದ್ಯಂತ ಪರ-ವಿರೋಧದ ಚರ್ಚೆಯ ನಡುವೆಯೇ ಮಾತೃಭಾಷೆಗೆ ಅವಮಾನ ಎಸಗಿರುವುದು ಸರಿ ಅಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿ ಬಂತು. ಹಿಂದೆಯೂ ಬೆಳ್ತಂಗಡಿಯಲ್ಲಿ ತುಳುನಾಡ ಸಂಘಟನೆಯೊಂದು ಇದೇ ರೀತಿ ತುಳು ಬಾವುಟ ಹಾರಿಸಿದ ಸಂದರ್ಭದಲ್ಲಿ ಪೊಲೀಸರು ಕೃತ್ಯ ಎಸಗಿದವರನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.