ಬೆಳ್ತಂಗಡಿ: ಈಗಾಗಲೇ ಅಕಾಲಿಕ ಮಳೆಯಿಂದ ಸಂಕಷ್ಟದಲ್ಲಿರುವ ಕೃಷಿಕರು ಇಂದು ಬೀಸಿದ ಬಿರುಗಾಳಿಯಿಂದ ಮತ್ತಷ್ಟು ಆತಂಕಕ್ಕೆ ಒಳಗಾಗುವಂತಾಗಿದೆ.
ಇವತ್ತು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಸುತ್ತಮುತ್ತ ಅನಿರೀಕ್ಷಿತವಾಗಿ ಬೀಸಿದ ಭಾರಿ ಗಾಳಿ ಸುಮಾರು ಹತ್ತಕ್ಕೂ ಅಧಿಕ ಮನೆಗಳು ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿ ಮಾಡಿದೆ. ಜೊತೆಗೆ ಭಾರಿ ಗಾತ್ರದ ಮರಗಳು, ತೋಟದ ಅಡಿಕೆ ಮರಗಳು ಗಾಳಿಯ ಹೊಡೆತಕ್ಕೆ ಸಿಲುಕಿ ತುಂಡಾಗಿ ಬಿದ್ದಿವೆ.
ಈ ಬಗ್ಗೆ 'ಈಟಿವಿ ಭಾರತ'ಗೆ ಪ್ರತಿಕ್ರಿಯೆ ನೀಡಿದ ಗ್ರಾ.ಪಂ. ಸದಸ್ಯ ದಿನೇಶ್ ಗೌಡ, ‘ಮಧ್ಯಾಹ್ನ 2 ಗಂಟೆಗೆ ಜೋರಾಗಿ ಗಾಳಿ ಬೀಸಿದ್ದು, ಮನೆಗಳಿಗೆ, ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಗಾಳಿಯ ತೀವ್ರತೆ ಎಷ್ಟಿತ್ತೆಂದರೆ ಕೆಲವರು ಮನೆಯಿಂದ ಹೊರಗೆ ಓಡಿಬರುವಂತಾಗಿದೆ' ಎಂದು ಹೇಳಿದ್ರು. ಕಳೆದ ಬಾರಿಯ ನೆರೆಯಿಂದ ಭಯಭೀತರಾಗಿರುವ ಈ ಭಾಗದ ಜನತೆ ಈಗ ಬಿರುಗಾಳಿಯಿಂದ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.