ಸುಬ್ರಮಣ್ಯ(ದಕ್ಷಿಣ ಕನ್ನಡ): ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರವೊಂದು ಮುರಿದು ಬಿದ್ದ ಘಟನೆ ಸುಬ್ರಹ್ಮಣ್ಯ - ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದರೆ, ಟೆಂಪೋ ಟ್ರಾವೆಲರ್ ಮೇಲೆ ಮರ ಬಿದ್ದು, ವಾಹನ ಜಖಂಗೊಂಡು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಸುಬ್ರಹ್ಮಣ್ಯ - ಧರ್ಮಸ್ಥಳ ರಾಜ್ಯ ಹೆದ್ದಾರಿಯ ಪೆರಯಶಾಂತಿ ಎಂಬಲ್ಲಿ ಭಾನುವಾರ ಸಂಭವಿಸಿದೆ.
ಸುಬ್ರಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಅದೇ ರೀತಿ ಸುಬ್ರಮಣ್ಯದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಮೇಲೆ ಪೆರಿಯಶಾಂತಿ ಸಮೀಪ ರಸ್ತೆಯ ಪಕ್ಕದಲ್ಲಿದ್ದ ಮರವೊಂದು ಉರುಳಿ ಬಿದ್ದಿದೆ. ಈ ಘಟನೆಯಲ್ಲಿ ಟ್ರಾವೆಲರ್ ಮೇಲ್ಭಾಗಕ್ಕೆ ಹಾನಿಯಾಗಿದ್ದು, ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಈಗಾಗಲೇ ಈ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಈ ಮಳೆಗೆ ರಸ್ತೆ ಬದಿಯಲ್ಲಿನ ಅಪಾಯಕಾರಿಯಾಗಿರುವ ಮರಗಳು ಉರುಳಿವೆ ಎಂದು ಹೇಳಲಾಗುತ್ತಿದೆ. ಈ ಭಾಗದ ಹೆದ್ದಾರಿಗಳಲ್ಲಿ ಆಗಾಗ ರಸ್ತೆ ಬದಿಯ ಮರಗಳು ಬಿದ್ದು ಪ್ರಾಣಹಾನಿ ಸಹಿತ ಅಪಾಯಗಳು ಆಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈಗಾಗಲೇ ರಸ್ತೆ ಬದಿಯ ಕೆಲವು ಮರಗಳನ್ನು ಅಪಾಯಕಾರಿ ಎಂದು ಗುರುತಿಸಿದ್ದರೂ ಅಂತಹ ಮರಗಳನ್ನು ತೆರವುಗೊಳಿಸಲು ಕಾನೂನಿನ ನೆಪ ಹೇಳುತ್ತಿರುವ ಅರಣ್ಯ ಇಲಾಖಾ ಅಧಿಕಾರಿಗಳು ಅಪಾಯ ಸಂಭವಿಸಿದಾಗ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾತ್ರ ಮಾಡುತ್ತಾರೆ ಎನ್ನಲಾಗ್ತಿದೆ. ಇನ್ನಾದರೂ ರಸ್ತೆ ಬದಿಯ ಮರ ತೆರವುಗೊಳಿಸುವಲ್ಲಿ ಅರಣ್ಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.