ಪುತ್ತೂರು(ದಕ್ಷಿಣ ಕನ್ನಡ): ಇಲ್ಲಿನ ತಾಲೂಕು ಕೇಂದ್ರದ ಪ್ರಮುಖ ತಾಣವಾಗಿರುವ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ತ್ಯಾಜ್ಯದ ರಾಶಿ ತುಂಬಿಕೊಂಡಿದ್ದು ಪುತ್ತೂರು ನಗರಸಭೆಯ 'ಸ್ವಚ್ಛ ಭಾರತ್' ಘೋಷಣೆಯನ್ನು ಅಣಕಿಸುತ್ತಿದೆ.
ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಗಳಿರುವ ಮಿನಿ ವಿಧಾನಸೌಧದ ಹಿಂಭಾಗದಲ್ಲಿ ತ್ಯಾಜ್ಯ ತುಂಬಿದ್ದು ದುರ್ನಾತ ಬೀರುತ್ತಿದೆ. ಹಾಗಾಗಿ ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಜನ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರಸಭಾ ವ್ಯಾಪ್ತಿಯಲ್ಲಿ ಮನೆ,ಮನೆ ಕಸ ಸಂಗ್ರಹ ಮಾಡುವ ವ್ಯವಸ್ಥೆ ಇದ್ದರೂ ನಗರಸಭೆಯ ಪಕ್ಕದಲ್ಲಿರುವ ಈ ಮಿನಿವಿಧಾನಸೌಧದ ಹಿಂಭಾಗದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಲಾಗಿದೆ. ಹಾಗಿದ್ದರೂ ಇಲ್ಲೇ ಕೆಲಸ ಮಾಡುವ ಅಧಿಕಾರಿಗಳಿಗೆ ಇದು ಕಾಣುತ್ತಿಲ್ಲ ಎಂಬುದು ಅಚ್ಚರಿ ಮೂಡಿಸುತ್ತಿದೆ.
ಈ ಹಿಂದೆ ಇದೇ ಸ್ಥಳದಲ್ಲಿ ಬಾಯ್ಬಿಟ್ಟಿದ್ದ ಎರಡು ಶೌಚಾಲಯದ ಗುಂಡಿಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ತಕ್ಷಣ ಆಗಿನ ಉಪವಿಭಾಗಾಧಿಕಾರಿ ಎಚ್.ಕೆ ಕೃಷ್ಣಮೂರ್ತಿ ಇದಕ್ಕೆ ಕಬ್ಬಿಣದ ಮುಚ್ಚಳ ಹಾಕಿಸುವ ಮೂಲಕ ಇಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿದ್ದರು.