ಮಂಗಳೂರು: ಆರನೇ ವೇತನ ಜಾರಿಯೊಂದು ಬಿಟ್ಟು ಸಾರಿಗೆ ನೌಕರರ ಬೇರೆಲ್ಲಾ ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲರ ಬೇಡಿಕೆಗಳನ್ನು ಈಡೇರಿಸಿ ಜನಪರ ಹಾಗೂ ನೌಕರರ ಪರವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ, ಸಾರಿಗೆ ನಿಗಮದ ನೌಕರರು ಸಹಕಾರ ನೀಡಬೇಕೆಂದು ಡಿಸಿಎಂ ಡಾ. ಸಿ ಎನ್ ಅಶ್ವತ್ಥ್ ನಾರಾಯಣ್ ಒತ್ತಾಯಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆಯಾದ ಆರನೇ ವೇತನದ ಜಾರಿ ಸ್ವಾಯತ್ತ ಸಂಸ್ಥೆಯಾದ ಸಾರಿಗೆ ನಿಗಮಕ್ಕೆ ಬಿಟ್ಟದ್ದು. ಅವರ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಸಂಬಳ ನಿಗದಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಸಾರಿಗೆ ನಿಯಮಕ್ಕೆ 1,200 ಕೋಟಿ ರೂ. ಅನುದಾನವನ್ನು ನೀಡಿದೆ. ಲಾಕ್ಡೌನ್ನಿಂದ ಸಾರಿಗೆ ನಿಗಮವು ಸಾಕಷ್ಟು ನಷ್ಟ ಅನುಭವಿಸಿದೆ. ಆದ್ದರಿಂದ, ನೌಕರರ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ಈ ಮುಷ್ಕರದಿಂದ ನಾಗರಿಕರಿಗೆ ತೊಂದರೆಯಾಗಲಿದ್ದು, ನೌಕರರೂ ನಿಗಮದ ಪರವಾಗಿ ಇರಬೇಕಾಗುತ್ತದೆ ಎಂದರು.
ಯತ್ನಾಳ್ ಹಾಗೂ ಈಶ್ವರಪ್ಪ ಪತ್ರ ವಿಚಾರದಲ್ಲಿ ನಾನೇನೂ ಹೇಳುವಂತಿಲ್ಲ. ಯತ್ನಾಳ್ ವಿಚಾರದಲ್ಲಿ ಪಕ್ಷದ ವರಿಷ್ಠರು ಮಾತನಾಡಿದ್ದಾರೆ. ನೋಟಿಸ್ ಕೊಟ್ಟಿದ್ದಾರೆ. ಅಲ್ಲದೇ ಅರುಣ್ ಸಿಂಗ್ ಅವರೂ ಈ ಬಗ್ಗೆ ಬಹಳ ಸ್ಪಷ್ಟವಾಗಿ ಉತ್ತರ ನೀಡಿದ್ದು, ಬೇರೆ ವಿಚಾರಕ್ಕೆ ಅವಕಾಶವಿಲ್ಲ. ಮತ್ತೊಮ್ಮೆ ಈ ಬಗ್ಗೆ ನಾನು ಮಾತನಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೋವಿಡ್ ನೈಟ್ ಕರ್ಫ್ಯೂ ಬಗ್ಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಇದಕ್ಕೆ ಸಹಕರಿಸಬೇಕು. ಎಲ್ಲರ ಜೀವ ಹಾಗೂ ಜೀವನ ಕಾಪಾಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಓದಿ: ಸಾರಿಗೆ ಮುಷ್ಕರ: ಯುಗಾದಿ ಹಬ್ಬಕ್ಕೆ ಊರಿಗೆ ತೆರಳುವವರಿಗೆ ಕಾದಿದೆ ಸಂಕಷ್ಟ