ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಬಂಟ್ವಾಳ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದ್ದು ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿ.ಸಿ.ರೋಡ್ - ಜಕ್ರಿಬೆಟ್ಟು ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಡಳಿತ ಜುಲೈ 18 ರ ವರೆಗೆ ಈ ಭಾಗದಲ್ಲಿ ವಾಹನ ಸಂಚಾರ ನಿಷೇಧಿಸಿ ಆದೇಶ ನೀಡಿದ ಬಳಿಕ ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಾಗುತ್ತಿರುವ ಪರಿಣಾಮ ಬಂಟ್ವಾಳ ಪೇಟೆಯಲ್ಲಿ ಸಂಚಾರದೊತ್ತಡ ಹೆಚ್ಚಾಗಿದೆ.
ರಸ್ತೆ, ಅಂಗಡಿ ಬದಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು ಒಂದೆಡೆಯಾದರೆ ವಾಹನಗಳು ಮುಖಾಮುಖಿಯಾಗಿ ಅಪಘಾತ ಸಂಭವಿಸುವ ಅವಕಾಶಗಳು ಹೆಚ್ವಿದೆ. ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸುವ ಸರ್ಕಾರಿ ಹಾಗೂ ಖಾಸಗಿ ಬಸ್ಗಳು ಪೇಟೆಯ ಮೂಲಕವೇ ಸಾಗುತ್ತಿರುವುದು ಸಹ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವಾಗುತ್ತಿದೆ.
ಬಂಟ್ವಾಳ ಡಿ ವೈ ಎಸ್ ಪಿ ನೇತೃತ್ವದಲ್ಲಿ ಈ ಹಿಂದೆ ನಡೆದ ವರ್ತಕರ ಸಭೆಯಲ್ಲಿ ಬಂಟ್ವಾಳ ಬಡ್ಡಕಟ್ಟೆ ಸೇತುವೆಯ ಬಳಿಯಿಂದ ಸರ್ಕಾರಿ ಆಸ್ಪತ್ರೆಯವರೆಗೆ ಯಾವುದೇ ವಾಹನಗಳು ರಸ್ತೆ ಬದಿ ನಿಲ್ಲದಂತೆ ತೀರ್ಮಾನಿಸಲಾಗಿದ್ದು, ಆ ತೀರ್ಮಾನವನ್ನು ಮರೆತು ಹೋದಂತಿದೆ.