ಬಂಟ್ವಾಳ: ಬಿ.ಸಿ.ರೋಡ್ – ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ 20 ದಿನಗಳ ಕಾಲ ಸಂಚಾರ ನಿಷೇಧಕ್ಕೆ ಆದೇಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಇಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಜಿ.ಎನ್.ಹೆಗ್ಡೆ ಹಾಗೂ ಎಇಇ ಎಚ್.ಪಿ.ರಮೇಶ್ ನಿಯೋಗ ಹೆದ್ದಾರಿ ಪರಿಶೀಲನೆ ನಡೆಸಿತು. ಒಂದೆರಡು ದಿನಗಳಲ್ಲಿ ಹೆದ್ದಾರಿಯ ಒಂದು ಬದಿಯ 7 ಮೀ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕ್ಯೂರಿಂಗ್ ಗಾಗಿ 20 ದಿನಗಳ ಸಮಯಾವಕಾಶ ಬೇಕಿರುವುದರಿಂದ ಸಂಚಾರ ನಿಷೇಧಕ್ಕೆ ಮನವಿ ಮಾಡಿದೆ. ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ನಿಂದ ಬೆಳ್ತಂಗಡಿಗೆ ಸಾಗುವ ಘನ ವಾಹನಗಳು ಬಿ.ಸಿ.ರೋಡ್-ಉಪ್ಪಿನಂಗಡಿ-ಗುರುವಾಯನಕೆರೆ ಮೂಲಕ ಸಂಚರಿಸಬೇಕು. ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಾಗುವುದಕ್ಕೆ ಕ್ರಮ ಕೈಗೊಳ್ಳುವಂತೆ ಎಸ್ ಪಿ ಗೆ ಸೂಚಿಸಲು ಪತ್ರದಲ್ಲಿ ತಿಳಿಸಲಾಗಿದೆ.
ಎಂಆರ್ಪಿಎಲ್ ಪೈಪ್ ಲೈನ್ ಕಾಮಗಾರಿಯನ್ನು ಕೂಡಾ ವೇಗವಾಗಿ ನಡೆಸುವಂತೆ ಅಧಿಕಾರಿಗಳು ಸೂಚಿಸಿ, ಬಳಿಕ ಹೆದ್ದಾರಿಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಸೂಚಿಸಿದ್ದಾರೆ. ರಾ.ಹೆ.ಇಲಾಖೆಯ ಜೆಇ ಕೇಶವಮೂರ್ತಿ, ಎಇ ಕೀರ್ತಿ ಅಮೀನ್, ಗುತ್ತಿಗೆಯ ಸಂಸ್ಥೆಯ ಶರಣ್ ಗೌಡ, ದಾಮೋದರ್ ಎಂ.ಕೆ. ಜೊತೆಗಿದ್ದರು.