ಮಂಗಳೂರು : ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಮಂಗಳೂರು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯು.ಜಿತೇಂದ್ರನಾಥ್‌ಗೆ ಏಳು ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ.ದಂಡ ಹಾಗೂ 2ನೇ ಆರೋಪಿ ಗುತ್ತಿಗೆ ಆಧಾರಿತ ಕಂಪ್ಯೂಟರ್ ಆಪರೇಟರ್ ಅನುಷ್ಕಾಗೆ 3 ವರ್ಷಗಳ ಸಾದಾ ಸಜೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ನ್ಯಾಯಾಧೀಶ ಬಿ.ಬಿ.ಜಕಾತಿ ತೀರ್ಪು ನೀಡಿದರು.
ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ರಾಜ್ಯ ಸರಕಾರದಿಂದ ಪ್ರವಾಸಿ ಟ್ಯಾಕ್ಸಿ ಖರೀದಿಸಲು ದೊರೆಯುವ ಸಹಾಯ ಧನ ಮಂಜೂರಾತಿಗೆ ಜಿತೇಂದ್ರನಾಥ್ ಅವರು 15 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬರ್ನಾಡ್ ರೋಶನ್ ಮಸ್ಕರೇನ್ಹಸ್ ಎಂಬುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ 2014ರ ಸೆ.10ರಂದು ದಾಳಿ ನಡೆಸಿ ಇವರನ್ನು ಬಂಧಿಸಲಾಗಿತ್ತು.
ಪೊಲೀಸ್ ನಿರೀಕ್ಷಕ ವಿಜಯ ಪ್ರಸಾದ್ ದಾಳಿ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದವನ್ನು ಮಂಡಿಸಿದ್ದರು.