ಬೆಂಗಳೂರು: ನೂತನ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರ್. ಟಿ ನಗರದ ನಿವಾಸದ ಬಳಿ ನೂರಾರು ಅಭಿಮಾನಿಗಳು ಆಗಮಿಸಿದ್ದು, ಮನೆ ಬಳಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಬಾಲಬ್ರೂಯಿ ಗೆಸ್ಟ್ ಹೌಸ್ ಬಳಿಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಮಾಡಿದರು.
ಬಳಿಕ ತಮ್ಮ ನಿವಾಸದ ಮನೆ ಬಳಿ ಮಾತನಾಡಿದ ಬೊಮ್ಮಾಯಿ, ಆದಷ್ಟು ಬೇಗ ಸಚಿವ ಸಂಪುಟ ರಚನೆಯಾಗುತ್ತದೆ. ಇವತ್ತೇ ಅದರ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ. ಇಂದು ನಾನು ಒಬ್ಬನೇ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದೇನೆ. ಪದಗ್ರಹಣದ ಬಳಿಕ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಕೆಲ ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದೇನೆ. ಅಲ್ಲದೇ ಇಂದು ಅಧಿಕಾರಿಗಳ ಜೊತೆ ಸಭೆ ಏರ್ಪಡಿಸಲಾಗಿದೆ. ಕೊವೀಡ್ ನಿರ್ವಹಣೆ ಹಾಗೂ ರಾಜ್ಯ ಪ್ರವಾಸ ಮಾಡುವ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.
ಓದಿ : ಇಂದು ರಾಜ್ಯದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರತಿಜ್ಞಾವಿಧಿ ಸ್ವೀಕಾರ
ನೂತನ ಸಿಎಂ ಬೊಮ್ಮಾಯಿ ಅವರಿಗೆ ಹೈಕಮಾಂಡ್ ನಾಯಕರಿಂದ ಶುಭಾಶಯಗಳು ಹರಿದು ಬಂದಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ನಾಯಕರು ದೂರವಾಣಿ ಮೂಲಕ ಶುಭಾಶಯ ಕೋರಿದ್ದಾರೆ.
ಹೊಸ ಮುಖ್ಯಮಂತ್ರಿ ಮನೆಗೆ ಮಾಜಿ ಸಚಿವ ಬೈರತಿ, ಬಸವರಾಜ್, ಶಾಸಕ ಎನ್. ಮಹೇಶ್, ವಿಧಾನಪರಿಷತ್ ಸದಸ್ಯ ಅರುಣ್ ಶಹಾಪುರ ಆಗಮಿಸಿದ್ದರು. ಶಿಗ್ಗಾವಿ ಹಾಗೂ ಹಾವೇರಿಯಿಂದ ಬಂದಿರುವ ಬೆರಳೆಣಿಕೆಯ ಪ್ರಮುಖ ವ್ಯಕ್ತಿಗಳಿಗಷ್ಟೆ ಮನೆಯಲ್ಲಿ ಬೊಮ್ಮಾಯಿ ಭೇಟಿಗೆ ಅವಕಾಶ ಮಾಡಲಾಯಿತು.
ನಿಯೋಜಿತ ಸಿಎಂ ಮನೆ ಬಳಿ ಭಾರಿ ಭದ್ರತೆ : ಮೂರು ಡಿಸಿಪಿಗಳ ನೇತೃತ್ವದಲ್ಲಿ ನೂತನ ಸಿಎಂ ನಿವಾಸಕ್ಕೆ ಭದ್ರತೆ ನೀಡಲಾಗಿದೆ. 10 ಇನ್ಸ್ಪೆಕ್ಟರ್ಗಳು, 20 ಸಬ್ ಇನ್ಸ್ಪೆಕ್ಟರ್ಗಳು, 350 ಕಾನ್ಸ್ಟೇಬಲ್ಗಳು, 6 ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಬೊಮ್ಮಾಯಿ ಮನೆ ಬಳಿಯ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.