ಮಂಗಳೂರು : ರೈತ ಸಂಘಟನೆಗಳು ಜಂಟಿಯಾಗಿ ನಾಳೆ ಕರೆ ನೀಡಿರುವ 'ಕರ್ನಾಟಕ ಬಂದ್' ವೇಳೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಿಲ್ಲೆಯಾದ್ಯಂತ 3 ಮಂದಿ ಎಎಸ್‌ಪಿ/ಡಿವೈಎಸ್‌ಪಿ, 8 ಮಂದಿ ಸಿಪಿಐ/ಪಿಐ, 25 ಮಂದಿ ಪಿಎಸ್ಐ, 45 ಮಂದಿ ಎಎಸ್ಐ, 320 ಮಂದಿ ಹೆಡ್ ಕಾನ್‌ಸ್ಟೇಬಲ್/ ಪೊಲೀಸ್ ಕಾನ್‌ಸ್ಟೇಬಲ್, 50 ಗೃಹರಕ್ಷಕ ಸಿಬ್ಬಂದಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅಲ್ಲದೆ ಇದರೊಂದಿಗೆ 3 ಕೆಎಸ್ಆರ್ಪಿ ತುಕಡಿ ಹಾಗೂ 3 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಬಿಸಿರೋಡ್, ಪುತ್ತೂರು, ಕಲ್ಲಡ್ಕ, ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ ಕಡೆ ನಿಯೋಜಿಸಲಾಗಿದೆ.
ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗದಂತೆ ಸಂಯಮದಿಂದ ವರ್ತಿಸಬೇಕು. ಬಲವಂತವಾಗಿ ಯಾರಾದ್ರೂ ಬಂದ್ ಮಾಡಲು ಒತ್ತಾಯಿಸಿದ್ರೆ ಜಿಲ್ಲಾ ನಿಯಂತ್ರಣ ಕೊಠಡಿಯ ದೂರವಾಣಿ (0824-2220508) ಕರೆ ಮಾಡಿ ತಿಳಿಸುವಂತೆ ತಿಳಿಸಲಾಗಿದೆ. ಇದೇ ವೇಳೆಯಲ್ಲಿ ಕೋವಿಡ್-19 ತಡೆಗಾಗಿ ಇರುವ ನಿಯಾಮವಳಿಗಳನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್ ಆದೇಶಿಸಿದ್ದಾರೆ.