ಸುಳ್ಯ: ಕುಕ್ಕೆ ಸುಬ್ರಮಣ್ಯದಲ್ಲಿ ಕಳೆದ ತಿಂಗಳು ಮಹಿಳೆಯೋರ್ವರು ನಾಪತ್ತೆಯಾಗಿದ್ದು ಈವರೆಗೂ ಪತ್ತೆಯಾಗಿಲ್ಲ. ಇದೀಗ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಪರಿಸರದಿಂದಲೂ ಇಬ್ಬರು ಮಹಿಳೆಯರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಳ್ಯದ ಸಂಪಾಜೆಯ ನಾಗವೇಣಿ (28) ಎಂಬವರು ನ. 21ರಂದು ಕಾಣೆಯಾಗಿದ್ದಾರೆ. ಇವರು ಸಂಪಾಜೆಯ ಕೀಲಾರು ಮೂಲೆಯಲ್ಲಿ ವಾಸವಾಗಿದ್ದರು. ಅರಂತೋಡು ಪೋಸ್ಟ್ ಆಫೀಸ್ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಸ್ ಮನೆಗೆ ಹಿಂತಿರುಗಿಲ್ಲ. ಮನೆಯವರು ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತಿದೆ ಎನ್ನಲಾಗಿದೆ. ಈಕೆಯು ಬಿಳಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಚೂಡಿದಾರ ಧರಿಸಿದ್ದರು. ಇವರು ಕನ್ನಡ, ತುಳು, ಮಲಯಾಳಂ ಭಾಷೆಗಳನ್ನು ಮಾತನಾಡುತ್ತಾರೆ.
ಇದೇ ರೀತಿಯ ಮತ್ತೊಂದು ಪ್ರಕರಣ ಸಂಪಾಜೆ ಗ್ರಾಮದ ನೆಲ್ಲಿಕುಮೇರಿಯಿಂದ ವರದಿಯಾಗಿದೆ. ವಿವಾಹಿತೆ ಮಹಿಳೆ ಮಹಾಲಕ್ಷೀ (38) ಸೆ.4 ರಂದು ಮನೆಯಿಂದ ರಬ್ಬರ್ ಟ್ಯಾಪಿಂಗ್ಗೆ ಹೋದವರು ಮರಳಿ ಬಂದಿಲ್ಲ. ಈಕೆಯ ಕುರಿತು ತಮಿಳುನಾಡು ಸೇರಿದಂತೆ ಎಲ್ಲಾ ಸಂಬಂಧಿಕರನ್ನು ವಿಚಾರಿಸಲಾಗಿದೆ. ಮಹಾಲಕ್ಷೀ ಕುಟುಂಬಸ್ಥರು ಸುಳ್ಯ ಠಾಣೆಗೆ ದೂರು ನೀಡಿದ್ದಾರೆ. ಇವರು ಬಿಳಿ ಮೈ ಬಣ್ಣ ಹೊಂದಿದ್ದು, ಕನ್ನಡ , ತುಳು, ಮಲಯಾಳಂ, ತಮಿಳು ಮಾತನಾಡುತ್ತಾರೆ.
ಇದನ್ನೂ ಓದಿ: ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್.. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟನೆ
ಇನ್ನೊಂದು ಪ್ರಕರಣ, ಕುಕ್ಕೆ ಸುಬ್ರಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಐನೇಕಿದು ಗ್ರಾಮದ ಭಾರತಿ ಮೂಕಮಲೆ (33) ಎಂಬುವರು ಅಕ್ಟೋಬರ್ 29ರಂದು ಕಾಣಿಯೂರಿಗೆ ಹೋದವರು ವಾಪಸ್ ಮನೆಗೆ ಬಂದಿಲ್ಲ. ಇವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ.
ಮನೆಯವರು ಎಲ್ಲೆಡೆ ಹುಡುಕಿದರೂ ಈ ಮೂವರ ಸುಳಿವು ದೊರೆತಿಲ್ಲ. ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಮತ್ತು ಸುಬ್ರಮಣ್ಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈ ಮೂವರು ಎಲ್ಲಿಯಾದರೂ ಕಂಡುಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಕಾಣೆಯಾಗಿದ್ದ ವ್ಯಕ್ತಿ ಪತ್ತೆ