ಮಂಗಳೂರು: ಚಿನ್ನದ ಸರ ಮತ್ತು ದ್ವಿಚಕ್ರ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ವಾಹನ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಹಬೀಬ್ ಹಸನ್ (39), ಬಿ.ಸಿ.ರೋಡ್ ಪಲ್ಲಮಜಲು ನಿವಾಸಿ ಅಬ್ದುಲ್ ಮನ್ನಾನ್ (32) ಮತ್ತು ಉಡುಪಿಯ ಅಲಂಕಾರು ನಿವಾಸಿ ಮುಹಮ್ಮದ್ ತೌಸಿಫ್ (28) ಬಂಧಿತ ಆರೋಪಿಗಳು.
ನಗರದ ಪಡುಪಣಂಬೂರು ಎಂಬಲ್ಲಿ ಡಿ.9ರಂದು ಮಧ್ಯಾಹ್ನ 3:30 ಸುಮಾರಿಗೆ ಕುಸುಮಾ ಎಂಬವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ದಾರಿ ಕೇಳುವ ನೆಪದಲ್ಲಿ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : 2 ತಿಂಗಳಿಂದ ಹಾಲು ಕದಿಯುತ್ತಿರುವ ಖದೀಮರು - ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ
ಇನ್ನೊಂದು ಪ್ರಕರಣದಲ್ಲಿ ಡಿ.18ರಂದು ಮಧ್ಯಾಹ್ನ 1:30ಕ್ಕೆ ಲೀಲಾ ಎಂಬವರು ಕಾಟಿಪಳ್ಳ 5ನೇ ಬ್ಲಾಕ್‌ನ ಸ.ಪ್ರಾ.ಶಾಲೆಯ ಬಳಿ ತನ್ನ ಮೊಮ್ಮಗನ ಜತೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಲೀಲಾ ಅವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದುಕೊಂಡು ಹೋಗಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಹಬೀಬ್ ಹಸನ್ ವಿರುದ್ಧ ಮಂಗಳೂರು ಬರ್ಕೆ, ಮೂಡುಬಿದಿರೆ, ಸುರತ್ಕಲ್, ಉಳ್ಳಾಲ, ಕೊಣಾಜೆ, ಬಜ್ಪೆ, ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 20ಕ್ಕೂ ಅಧಿಕ ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತ ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಮತ್ತೋರ್ವ ಆರೋಪಿ ಅಬ್ದುಲ್ ಮನ್ನಾನ್ ವಿರುದ್ಧ ಕೊಣಾಜೆ, ಉಳ್ಳಾಲ, ಬರ್ಕೆ, ಕಂಕನಾಡಿ ನಗರ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಕೊಲೆ, ದರೋಡೆ, ಹಲ್ಲೆ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತ ಸುಮಾರು 10 ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ.
ಇನ್ನೋರ್ವ ಆರೋಪಿ ಮುಹಮ್ಮದ್ ತೌಸಿಫ್ ವಿರುದ್ಧವೂ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.
ಹಬೀಬ್ ಹಸನ್ ಮತ್ತು ಮುಹಮ್ಮದ್ ತೌಸಿಫ್ ಡಿ.17ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠದಲ್ಲಿ ಸುಮಾರು 50,000 ರೂ. ಮೌಲ್ಯದ ಬೈಕ್ ಕಳವು ಮಾಡಿದ್ದರು. ನ.25ರಂದು ಮಂಗಳೂರಿನ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯಿಂದ ಅಂದಾಜು 35,000 ರೂ. ಮೌಲ್ಯದ ಸ್ಕೂಟರ್ ಕಳವು ಮಾಡಿದ್ದರು. ನ.30ರಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ರಿಸರ್ವೇಶನ್ ಸೆಂಟರ್‌ನ ಪಾರ್ಕಿಂಗ್ ಸ್ಥಳದಿಂದ ಅಂದಾಜು 12,000 ರೂ. ಮೌಲ್ಯದ ಬೈಕ್ ಕಳ್ಳತನ ಮಾಡಿದ್ದರು. ಮುಹಮ್ಮದ್ ತೌಸಿಫ್ ಬೆಂಗಳೂರಿನ ಮೈಕೋ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 50,000 ರೂ. ಅಂದಾಜು ಮೌಲ್ಯದ ಬೈಕ್ ಕಳವು ಮಾಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮದುವೆ ಮನೆಗೆ ನುಗ್ಗಿ ಬರೋಬ್ಬರಿ ಕೋಟಿ ರೂ ಬೆಲೆಯ ಬಂಗಾರ ಕದ್ದೊಯ್ದ ಕಳ್ಳರು!!
ಈ ಸರ ಮತ್ತು ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಳಿಯಿದ್ದ 2.55 ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಕರಿಮಣಿ ಸರಗಳು, ಕಳವು ಮಾಡಿರುವ ನಾಲ್ಕು ದ್ವಿಚಕ್ರ ವಾಹನ, ಅಪರಾಧ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ಮೂರು ಮೊಬೈಲ್ ಪೋನ್ ಸೇರಿದಂತೆ ಒಟ್ಟು ಅಂದಾಜು 5.19 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹರಿರಾಮ್ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ.ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐಗಳಾದ ರಾಜೇಂದ್ರ ಬಿ., ಪ್ರದೀಪ್ ಟಿ.ಆರ್ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.