ಪುತ್ತೂರು: ಪುತ್ತೂರಿನ ಸಂಚಾರಿ ಪೊಲೀಸ್ ಠಾಣೆಯಿಂದ ಮೂವರು ಅಧಿಕಾರಿಗಳು ವರ್ಗಾವಣೆಗೊಂಡಿದ್ದು, ಅವರನ್ನು ಸನ್ಮಾನಿಸಿಸಿ ಬೀಳ್ಕೊಡಲಾಯಿತು.
ಸಂಚಾರಿ ಪೊಲೀಸ್ ಠಾಣೆಯ ಎಸ್ಐ ಆಗಿದ್ದ ಚೆಲುವಯ್ಯ ಮೈಸೂರು ಜಿಲ್ಲೆಗೆ ವರ್ಗಾವಣೆ ಆಗಿದ್ದಾರೆ. ವಿಠಲ ಜೋಗಣ್ಣ ಎಂಬುವವರು ಕಡಬ ಠಾಣೆಗೆ ವರ್ಗಗೊಂಡಿದ್ದಾರೆ. ಇನ್ನೂ ಪದೋನ್ನತಿ ಹೊಂದಿ ಗ್ರಾಮಾಂತರ ಠಾಣೆಗೆ ಜಗನ್ನಾಥ ಎಂಬುವವರು ವರ್ಗಾವಣೆಗೊಂಡಿದ್ದಾರೆ.
ಪೊಲೀಸ್ ಕರ್ತವ್ಯ ಎಂದ ಮೇಲೆ ಕೆಲಸ ಹೆಚ್ಚು, ಜವಾಬ್ದಾರಿಯು ಹೆಚ್ಚಿರುತ್ತದೆ. ಇವೆಲ್ಲದರ ಮಧ್ಯೆ ಆರೋಗ್ಯ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಪುತ್ತೂರು ಉಪವಿಭಾಗದ ಎಎಸ್ಪಿ ಲಕನ್ ಸಿಂಗ್ ಯಾದವ್ ಸಲಹೆ ನೀಡಿದರು.
ಇಲ್ಲಿನ ಭೌಗೋಳಿಕ ಪರಿಸರ, ಜನತೆ, ಇಲಾಖೆಯ ಒಡನಾಟ, ಮೇಲಧಿಕಾರಿಗಳ ಸಲಹೆ ಉತ್ತಮವಾಗಿದೆ ಎಂದು ವರ್ಗಾವಣೆಗೊಂಡ ಅಧಿಕಾರಿಗಳು ಅಭಿಪ್ರಾಯಪಟ್ಟರು.
ಪುತ್ತೂರು ನಗರ ಪೊಲೀಸ್ ಠಾಣೆಯ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಕುಸುಮಾಧರ್, ಎಸ್.ಐ ಜಂಬುರಾಜ್ ಮಹಾಜನ್ ಅವರು ಮಾತನಾಡಿದರು. ಪುತ್ತೂರಿಗೆ ನೂತನವಾಗಿ ಆಗಮಿಸಿ ಕರ್ತವ್ಯಕ್ಕೆ ಹಾಜರಾದ ಎಎಸ್ಪಿ ಲಕನ್ ಸಿಂಗ್ ಯಾದವ್ ಮತ್ತು ಸಂಚಾರ ಪೊಲೀಸ್ ಠಾಣೆಯ ಎಸ್ಐ ರಾಮ ನಾಯ್ಕ, ಹೆಡ್‌ಕಾನ್‌ಸ್ಟೇಬಲ್ ವಿನಯ, ಸತೀಶ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಎಎಸ್ಐ ಸುರೇಶ್ ಶರ್ಮ, ಹೆಡ್‌ಕಾನಸ್ಟೇಬಲ್ ಸ್ಕರೀಯ, ಕಿರಣ್, ಹೆಡ್‌ಕಾನ್‌ಸ್ಟೇಬಲ್ ಶಿವಪ್ರಸಾದ್, ಎಎಸ್ಐ ಚಿದಾನಂದ, ಕುಶಾಲಪ್ಪ ಗೌಡ ಅತಿಥಿಗಳನ್ನು ಗೌರವಿಸಿದರು. ಸಂಚಾರ ಪೊಲೀಸ್ ಠಾಣೆಯ ಎಸ್ಐ ರಾಮ ನಾಯ್ಕ್ ಇದ್ದರು.