ಮಂಗಳೂರು: 200 ಯುನಿಟ್ ಉಚಿತ ಮತ್ತು ಮಹಿಳೆಯರಿಗೆ 2 ಸಾವಿರ ನಗದು ನೀಡುವುದಾಗಿ ಘೋಷಿಸಿದ ಕಾಂಗ್ರೆಸ್ನಿಂದ ಇನ್ನೂ ಮೂರು ಯೋಜನೆಗಳು ಬಾಕಿ ಇವೆ ಎಂದು ವಿಪಕ್ಷ ಉಪನಾಯಕ ಯು ಟಿ ಖಾದರ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹೇಳಿದಂತೆ ನಡೆದು ಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸೋಲಿಸಿ ಮನೆಗೆ ಕಳುಹಿಸುವುದು ಗ್ಯಾರಂಟಿ. ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಜನಸಾಮಾನ್ಯರ ಜೀವನದಲ್ಲಿ ಸುಧಾರಣೆಯಾಗುವುದು ಗ್ಯಾರಂಟಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಕಳೆದ ಬಾರಿ ಪ್ರಣಾಳಿಕೆಯಲ್ಲಿ ನೀಡಿದ 169 ಭರವಸೆಯನ್ನು ನೀಡಿದ್ದು, ಅದನ್ನು ಸಂಪೂರ್ಣವಾಗಿ ಈಡೇರಿಸಿದ್ದೇವೆ. ಅಷ್ಟು ಮಾತ್ರವಲ್ಲದೇ ಅಧಿಕಾರಕ್ಕೆ ಬಂದ ಬಳಿಕ ಕಾಲಕಾಲಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿದ್ದೇವೆ. ಕಾಂಗ್ರೆಸ್ ಮಾಡಿರುವ ಘೋಷಣೆಯಿಂದ ಬಿಜೆಪಿಯವರು ವಿಚಲಿತರಾಗಿ ಇಲ್ಲಸಲ್ಲದ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ನಾವು ಆರ್ಥಿಕ ಸೋರಿಕೆ ತಡೆದು, ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಮೊದಲಿನಿಂದಲು ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಪರವಾಗಿ ಇದೆ, ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಇದ್ದಾಗ ಅರೆಸ್ಟ್ ಮಾಡಿದ ಉಗ್ರನನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ಕಂದಹಾರ್ಗೆ ಕರೆದುಕೊಂಡು ಹೋಗಿತ್ತು, ಪಾಕಿಸ್ತಾನವು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳನ್ನು ನಿಷೇಧ ಮಾಡಿತ್ತು. ಆದರೆ, ಬಿಜಪಿ ಅಧಿಕಾರಕ್ಕೆ ಬಂದ ನಂತರ ನಿಲ್ಲಿಸಿದ ಕ್ರಿಕೆಟ್ ಪಂದ್ಯಗಳನ್ನು ಮತ್ತೆ ಆರಂಭ ಮಾಡಿತ್ತು. ಪಾಕಿಸ್ತಾನ ದೇಶದ ಪ್ರಧಾನಿ ಕರೆಯದೇ ಇದ್ದರೂ ನಮ್ಮ ದೇಶದ ಪ್ರಧಾನ ಮಂತ್ರಿ ಮೋದಿ ಅವರು ಅಲ್ಲಿಗೆ ಹೋಗಿ ಚಾ ಕುಡಿದು ಬಂದಿದ್ದರು ಎಂದು ತಿಳಿಸಿದ್ದಾರೆ.
ದುಶ್ಚಟಗಳನ್ನು ಪ್ರೇರೆಪಿಸುವ ಪ್ರಯತ್ನ ಮಾಡುತ್ತಿದ್ದಾರೆ: 18 ವರ್ಷದ ಯುವಕರಿಗೆ ಮದ್ಯ ಖರೀದಿಗೆ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ. ಬಿಜೆಪಿ ಸರ್ಕಾರ ತೀರ್ಮಾನ ಒಂದು ತಲೆಮಾರನ್ನು ನಾಶ ಮಾಡುವ ಪ್ರಯತ್ನವಾಗಿದೆ. ನಮ್ಮ ಪಕ್ಷ ಸಂಸ್ಕೃತಿ ಉಳ್ಳದ್ದು, ನಮ್ಮ ಪಕ್ಷ ಮೌಲ್ಯಯುತವಾದದ್ದು ಎಂದು ಹೇಳುವ ಬಿಜೆಪಿ ಪಕ್ಷದವರು ಯುವ ಸಬಲೀಕರಣ ಎಂದು ಮಾತನಾಡುವವರು, ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ಯುವಕರನ್ನು ಮದ್ಯಪಾನದ ಚಟಕ್ಕೆ ಬೀಳಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ದುಶ್ಚಟದಿಂದ ದೂರ ಮಾಡಬೇಕಾದವರು ದುಶ್ಚಟ ಪ್ರೇರೆಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರಕ್ಕೆ ಇದರ ಪರಿಣಾಮ ಅರ್ಥವಾಗುವುದಿಲ್ಲ. ಬಿಜೆಪಿಯವರು ಹಣ ಮಾಡುವುದನ್ನು ಮಾತ್ರ ನೋಡುತ್ತಿದ್ದಾರೆ. ಪೆಟ್ರೋಲ್, ಗ್ಯಾಸ್, 40 ಪರ್ಸೆಂಟ್ ಕಮೀಷನ್ನಲ್ಲಿ ಹಣ ಮಾಡಿದವರು ಇದೀಗ ಮಕ್ಕಳಿಗೆ ಮದ್ಯಪಾನ ಕುಡಿಸಿ ಹಣ ಮಾಡಲು ಹೊರಟಿದ್ದಾರೆ. ಇದು ನೋವಿನ ವಿಚಾರ ಎಂದರು. 18 ವರ್ಷದ ಯುವಕರಿಗೆ ಮದ್ಯ ಖರೀದಿಗೆ ಚಿಂತನೆ ನಡೆಸಿರುವುದನ್ನು ಕೂಡಲೇ ಸರ್ಕಾರ ಹಿಂಪಡೆಯಬೇಕು, ಆರೋಗ್ಯ ಸಚಿವರು, ಗೃಹ ಸಚಿವರು ಇದನ್ನು ವಿರೋಧಿಸಿ ಈ ಯೋಜನೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಕೇಂದ್ರ ಸರ್ಕಾರದ 'ಒಂದು ದೇಶ ಒಂದು ಸಮವಸ್ತ್ರ' ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ