ಬಂಟ್ವಾಳ (ದ.ಕ): ಕೇರಳದ ಕಾಸರಗೋಡು ಜಿಲ್ಲೆಯ ಕೆಲ ಭಾಗಗಳಲ್ಲಿ ಡಿ ಗ್ಯಾಂಗ್ ಸದಸ್ಯರು ಎಂದು ಹೇಳಿಕೊಂಡು ದುಷ್ಕೃತ್ಯ ಎಸಗುತ್ತಿದ್ದ ತಂಡವೊಂದನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದಿಂದ ತಪ್ಪಿಸಿಕೊಂಡು ಕರ್ನಾಟಕದ ಗಡಿ ಪ್ರದೇಶವಾದ ಸಾಲೆತ್ತೂರು ಸಮೀಪ ಅವರನ್ನು ವಿಟ್ಲ ಪೊಲೀಸ್ ಎಸ್ಐ ವಿನೋದ್ ರೆಡ್ಡಿ ನೇತೃತ್ವದ ತಂಡ ಬಂಧಿಸಿದೆ.
ಬಂಧಿತರನ್ನು ಕೇರಳದ ಮಂಗಲ್ಪಾಡಿ ನಿವಾಸಿಗಳಾದ ಅಬ್ದುಲ್ ಲತೀಫ್ (23), ಮೀಯಪದವು ನಿವಾಸಿ ಶಾಕೀರ್ (23), ಅಡ್ಕಂತಗುರಿ ನಿವಾಸಿ ಅಸ್ಪಾಕ್(25) ವಿರುದ್ಧ ಪ್ರಕರಣ ದಾಖಲಾಗಿದೆ. ಬಂಧಿತರಿಂದ ಒಂದು ಕಾರು, 1 ಪಿಸ್ತೂಲ್, 13 ಸಜೀವ ಗುಂಡುಗಳು, 1 ಡ್ರಾಗರ್ ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಮೇಲೆ ಗುಂಡು ಹಾರಿಸಿದ ಗ್ಯಾಂಗ್ : ಕಾಸರಗೋಡು, ಪೈವಳಿಕೆ ಮತ್ತು ಮಿಯಪದವು ಪ್ರದೇಶಗಳಲ್ಲಿ ತಮ್ಮನ್ನು ಡಿ ಗ್ಯಾಂಗ್ ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಇದರ ಆಧಾರದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ, ಇದೇ ವೇಳೆ ಕೇರಳದ ಉಪ್ಪಳ ಪ್ರದೇಶದ ಹಿದಾಯತ್ ನಗರದ ಕ್ಲಬ್ವೊಂದರಲ್ಲಿ ಈ ಗ್ಯಾಂಗ್ ಗಲಾಟೆ ನಡೆಸಿ ಗುಂಡು ಹಾರಿಸಿತ್ತು. ಬಳಿಕ ಕೇರಳ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಜೀಪಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ನಂತರ ಕರ್ನಾಟಕ ಗಡಿ ಕಡೆಗೆ ಧಾವಿಸಿದ್ದರು. ಈ ಹಿನ್ನೆಲೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿಲಾಗಿತ್ತು. ಬಳಿಕ ಪೊಲೀಸರು ಎಲ್ಲೆಡೆ ನಾಕಾಬಂಧಿ ಹಾಕಿ ಆರೋಪಿಗಳಿಗಾಗಿ ಕಾದಿದ್ದರು. ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಕರ್ನಾಟಕ ಕೇರಳ ಗಡಿ ಭಾಗವಾದ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಕೊಡಂಗೆ ಚೆಕ್ಪೋಸ್ಟ್ನಲ್ಲಿ ರಾತ್ರಿಯಿಂದಲೇ ಆರೋಪಿಗಳನ್ನ ಹಿಡಿಯಲು ಕಾಯುತ್ತಿದ್ದರು.
ಬೆಳಗಿನ ಜಾವ 4ಗಂಟೆ ಸುಮಾರಿಗೆ ಆಗಮಿಸಿದ ಆರೋಪಿಗಳನ್ನ ಹಿಡಿಯಲು ಮುಂದಾದಾಗ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ತಪ್ಪಿಸಿಕೊಳ್ಳುತ್ತಿದ್ದ ಮೂವರು ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಕಾರನ್ನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಟ್ರಕ್‌ನಲ್ಲಿ 500 ಕೆ.ಜಿ ಗಾಂಜಾ ಸಾಗಾಟ: ಕೆ.ಆರ್ ಪುರಂ ಪೊಲೀಸರಿಂದ ಆರೋಪಿಗಳ ಬಂಧನ