ಮಂಗಳೂರು (ದಕ್ಷಿಣ ಕನ್ನಡ): ಇಲ್ಲಿನ ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಸೋಮವಾರ ರಾತ್ರಿ ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿದೆ. ಪ್ರಕರಣ ಸಂಬಂಧ ವಿಜಯ್, ಅಭಿಲಾಷ್ ಹಾಗೂ ಸಂಜಯ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೂವರು ಯುವಕರ ಗುಂಪು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ವಿದ್ಯಾರ್ಥಿಯೊಬ್ಬ ದೂರು ನೀಡಿದ್ದ. ಮೂಡುಬಿದಿರೆ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಬಳಿ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕಾರಣಕ್ಕೆ ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು. ಬಂಧಿತ ಮೂವರು ಸಂಘಟನೆಯೊಂದಕ್ಕೆ ಸೇರಿದವರಾಗಿದ್ದು, ಇನ್ನೂ ಕೆಲ ಮಂದಿ ಇದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ಮೂಡಬಿದಿರೆಯ ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಎದುರು ತನ್ನೂರು ಬೆಂಗಳೂರಿಗೆ ಹೋಗಲು ಬಸ್ಗೆ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ಸಹಪಾಠಿ ವಿದ್ಯಾರ್ಥಿ ಮಾತನಾಡಿಸಿದ್ದ. ಇಬ್ಬರೂ ಮೂಡುಬಿದಿರೆಯ ಒಂದೇ ಕಾಲೇಜಿನ ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಬಸ್ ಬಂದ ಬಳಿಕ ವಿದ್ಯಾರ್ಥಿನಿ ಹತ್ತಿಕೊಂಡು ಹೋಗಿದ್ದಾಳೆ. ಆದರೆ, ಅಲ್ಲೇ ಇದ್ದ ಆರೋಪಿಗಳು ಮಾತನಾಡಿಸಿದ ವಿದ್ಯಾರ್ಥಿಯು ಬೇರೆ ಸಮುದಾಯದವ ಎಂಬ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮೂಡುಬಿದಿರೆ ಪೊಲೀಸರು ಸ್ಥಳಕ್ಕಾಗಮಿಸಿ ಆ ವಿದ್ಯಾರ್ಥಿಯನ್ನು ಠಾಣೆಗೆ ಕರೆದೊಯ್ದಿದ್ದರು.
ಸೋಮವಾರ ರಾತ್ರಿಯೇ ಕಾಂಗ್ರೆಸ್ ಮುಖಂಡರು ಠಾಣೆಗೆ ತೆರಳಿದ್ದರು. ಮಂಗಳವಾರ ಬೆಳಗ್ಗೆ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದ್ದರು. ಅಲ್ಲದೆ ಸೋಮವಾರ ರಾತ್ರಿಯೇ ಎಸಿಪಿ ಅವರು ಮೂಡುಬಿದಿರೆಗೆ ಬಂದು ಘಟನೆ ಬಗ್ಗೆ ವಿಚಾರಿಸಿದ್ದರು. ಸದ್ಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಸುಳ್ಯದಲ್ಲೂ ದಾಖಲಾಗಿತ್ತು ನೈತಿಕ ಪೊಲೀಸ್‌ಗಿರಿ ಪ್ರಕರಣ : ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ನೈತಿಕ ಪೊಲೀಸ್‌ಗಿರಿ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕೇರಳದ ಮಲಪ್ಪುರಂ ನಿವಾಸಿ ಮೊಹಮ್ಮದ್ ಜಲೀಲ್ (39) ಎಂಬವರು ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಯುವತಿಯೊಬ್ಬಳಿಗೆ ವಿಶ್ರಾಂತಿ ಪಡೆಯಲು ಜಲೀಲ್ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿದ್ದ. ಇದರ ಬೆನ್ನಲ್ಲೇ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕಿನ ತೋಡಿಕಾನಕ್ಕೆ ತೆರಳಿದ್ದಾಗ 5 ಜನರ ತಂಡವೊಂದು ಕಾರು ಮತ್ತು ಸ್ಕೂಟರ್ನಲ್ಲಿ ಬಂದು ಜಲೀಲ್ ಕಾರನ್ನು ತಡೆದು ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಇದನ್ನೂ ಓದಿ: ನೈತಿಕ ಪೊಲೀಸ್‌ಗಿರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ದಿನೇಶ್ ಗುಂಡೂರಾವ್