ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯುವಕನೊಬ್ಬನನ್ನು ಹುಸಿ ಕರೆಯ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, ತೀವ್ರ ತನಿಖೆ ನಡೆಸಲಾಗುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬಂದ ಕರೆಯ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ ಬಜ್ಪೆ ಪೊಲೀಸರು ಆರೋಪಿಯ ಜಾಡು ಹಿಡಿದು ಕಾರ್ಕಳಕ್ಕೆ ತೆರಳಿ ಬಂಧಿಸಿದ್ದಾರೆ. ಇನ್ನು ಈತನನ್ನು ಬಜ್ಪೆ ಪೊಲೀಸರು ತೀವ್ರ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನು ಓದಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ; ಕೆಲ ಕಾಲ ಆತಂಕ
ಕನ್ನಡದಲ್ಲಿ ಮೆಸೆಜ್ ಮಾಡಿದ್ದ ಆರೋಪಿ: ಮಂಗಳೂರು ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರ ಮೊಬೈಲ್ಗೆ ಏರ್ ಪೋರ್ಟ್ನಲ್ಲಿ ಬಾಂಬ್ ಇದೆ ಎಂದು ಮೆಸೇಜ್ ಮಾಡಿದ್ದ. ಇದೇ ಮೆಸೇಜ್ನ್ನು ಎರಡು ಬಾರಿ ಕಳುಹಿಸಿದ್ದ. ಮಧ್ಯಾಹ್ನ 1 ಗಂಟೆ ವೇಳೆಗೆ ಕರೆ ಮಾಡಿ ಏರ್ ಪೋರ್ಟ್ ಎಂದು ಪ್ರಶ್ನಿಸಿದ್ದಾನೆ. ಮಾಜಿ ನಿರ್ದೇಶಕರು ಅಲ್ಲ ಎಂದು ಹೇಳಿದ್ದಕ್ಕೆ ಹಾಗಾದರೆ ಫೋನ್ ಇಡು ಎಂದು ಏಕವಚನದಲ್ಲಿ ಹೇಳಿ ಕರೆ ಕಟ್ ಮಾಡಿದ್ದ. ಕೂಡಲೇ ಅವರು ಏರ್ ಪೋರ್ಟ್ ನಿರ್ದೇಶಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣವನ್ನು ಸಂಪೂರ್ಣ ತಪಾಸಣೆ ನಡೆಸಿ ಹುಸಿ ಸಂದೇಶ ಎಂಬುದನ್ನು ದೃಢಪಡಿಸಿದ್ದಾರೆ.