ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ''ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದೀಗ ಜೆಡಿಎಸ್ ಕೂಡ ಎನ್ಡಿಎ ಜೊತೆಯಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಲಿದೆ. ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡದ್ದನ್ನು ಬಡ್ಡಿ ಸಮೇತ ಪಡೆದುಕೊಳ್ಳಲಿದ್ದೇವೆ'' ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಡಿ ವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅನೀರಿಕ್ಷಿತ ಹಿನ್ನಡೆಯಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅಸಾಧ್ಯ. ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರದಲ್ಲಿ ನಡೆಯುವ ಚುನಾವಣೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಒಂಬತ್ತುವರೆ ವರ್ಷದ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಅವರಿಂದ ಅಭಿವೃದ್ಧಿಗೆ ಅರ್ಥ ಬಂದಿದೆ'' ಎಂದರು.
ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ: ''ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ. ಎಂಎಲ್ಎ, ಎಂಪಿ, ಎಂಎಲ್‌ಸಿ, ಮುಖ್ಯಮಂತ್ರಿ, ಕೇಂದ್ರ ಸಚಿವ ಸ್ಥಾನ, ರಾಜ್ಯ, ರಾಷ್ಟ್ರೀಯ ಹುದ್ದೆಗಳನ್ನು ನೀಡಿದೆ. ನಾನು ಏನಾದರೂ ಪಕ್ಷಕ್ಕೆ ನೀಡುವುದೇ ಬಾಕಿ ಇರುವುದು. ಆದ್ದರಿಂದ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ'' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
''ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ಆಂತರಿಕ ಕಚ್ಚಾಟ ಆರಂಭಗೊಂಡಿದೆ. ಪಕ್ಷದಲ್ಲೇ ಶಾಸಕರು, ಸಚಿವರು ಅಸಮಾಧಾನ ಹೊರಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮನೆಯೊಂದು ನೂರು ಬಾಗಿಲಿನಂತೆ ಇದೆ'' ಎಂದ ಅವರು, ''ರಾಜ್ಯದ ಜನರೇ ರಾಜ್ಯದ ಕಾಂಗ್ರೆಸ್ ಸರ್ಕಾರ ಹೆಚ್ಚು ಸಮಯ ಉಳಿಯುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ಈ ಹಿಂದಿನಿಂದಲೂ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಲೇ ಬಂದಿದೆ'' ಎಂದು ತಿಳಿಸಿದರು.
ದಕ್ಷಿಣ ಕನ್ನಡದಲ್ಲಿ ಲೋಕಸಭಾ ಚುನಾವಣೆಗೆ ಅರುಣ್ ಕುಮಾರ್ ಪುತ್ತಿಲ ಬಂಡಾಯ ಸ್ಪರ್ಧೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸದಾನಂದ ಗೌಡ, ''ನಾನು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ, ಲೋಕಸಭಾ ಚುನಾವಣೆಯಲ್ಲಿ ಯಾರೇ ಸ್ಪರ್ಧೆ ಮಾಡಿದರೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ'' ಎಂದರು.
ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ: ''ಕಸ್ತೂರಿ ರಂಗನ್ ವರದಿಯನ್ನು ಈ ಭಾಗದಲ್ಲಿ ಅನುಷ್ಠಾನ ಮಾಡುವುದನ್ನು ನಾನು ಈ ಹಿಂದಿನಿಂದಲೂ ವಿರೋಧಿಸಿದ್ದೇನೆ. ಸ್ಯಾಟಲೈಟ್ ಮೂಲಕ ಸಮೀಕ್ಷೆ ನಡೆಸಿದ್ದರಿಂದ ಈ ಭಾಗದ ಅಡಿಕೆ, ರಬ್ಬರ್ ಕೃಷಿ ಪ್ರದೇಶವನ್ನೂ ಅರಣ್ಯ ಎಂದು ಕಸ್ತೂರಿ ರಂಗನ್ ವರದಿಗೆ ಸೇರಿಸಲಾಗಿದೆ. ಈ ಹಿಂದೆ ಕಸ್ತೂರಿ ರಂಗನ್ ವರದಿ ಅನುಷ್ಠಾನ ಮಾಡದಂತೆ ಪ್ರಧಾನಿಗೂ ಒತ್ತಡ ಹಾಕಿದ್ದೆವು'' ಎಂದು ವಿವರಿಸಿದರು.
ಅಡಿಕೆ ಬೆಳೆಗಾರರ ಬೆಂಬಲಕ್ಕೆ ನಾನಿದ್ದೇನೆ: ''ಅಡಿಕೆ ಬೆಳೆಗಾರರ ಹಿತ ಕಾಯಲು ನಾನು ಸದಾ ಬದ್ಧನಾಗಿದ್ದೇನೆ. ಈವರೆಗೂ ಅದನ್ನು ಮಾಡಿದ್ದೇನೆ. ಅಡಿಕೆ ಬೆಲೆ ಕುಸಿತ, ಕಳ್ಳ ಸಾಗಾಟ ತಡೆಗೆ ಪೂರಕ ಕ್ರಮ ಕೈಗೊಂಡಿದ್ದೇನೆ. ಅಡಿಕೆ ಹಳದಿ ರೋಗಕ್ಕೆ ನಮ್ಮ ಸರ್ಕಾರ 25 ಕೋಟಿ ಅನುದಾನ ಇರಿಸಿ, ಸಂಶೋಧನಾ ಕೇಂದ್ರ ಸ್ಥಾಪನೆಗೆ ಮುಂದಾಗಿತ್ತು. ರೋಗ ಬಾರದ ತಳಿ ಅಭಿವೃದ್ಧಿ, ಇತರೆ ಪೂರಕ ಕ್ರಮಗಳನ್ನು ನಮ್ಮ ಸರಕಾರ ಕೈಗೊಳ್ಳುವ ಮೂಲಕ ಅಡಿಕೆ ಬೆಳೆಗಾರರ ಜೊತೆ ಕೈಜೋಡಿಸಿದ್ದೇವೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿ.ವಿ. ಸದಾನಂದಗೌಡ ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಕ್ಷೇತ್ರದಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ಮಹಾಭಿಷೇಕ ಸೇವೆ ನೆರವೇರಿಸಿದರು. ಪತ್ನಿ ಡಾಟಿ ಸದಾನಂದ ಗೌಡ, ಪುತ್ರ ಕಾರ್ತಿಕ್, ಅವರ ಪತ್ನಿ ಹಾಗೂ ಮನೆಯವರು ಜೊತೆಗಿದ್ದರು. ದೇವಳದ ವತಿಯಿಂದ ಡಿ.ವಿ. ಸದಾನಂದ ಗೌಡ ಅವರನ್ನು ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ಭಟ್, ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು.
ಇದನ್ನೂ ಓದಿ: ಚಿಕ್ಕಮಗಳೂರು: ಲಂಚ ಪಡೆಯುತ್ತಿದ್ದ ಡಿಡಿಪಿಐ, ದ್ವಿತೀಯ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ