ಉಪ್ಪಿನಂಗಡಿ(ದಕ್ಷಿಣ ಕನ್ನಡ): ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿವೋರ್ವನನ್ನು ಉಪ್ಪಿನಂಗಡಿ ಪೊಲೀಸರು ವಿಚಾರಿಸಿದ ವೇಳೆ ಈತ ದಕ್ಷಿಣ ಕನ್ನಡದ ಹಲವು ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಶಂಕರಪುರ ನಿವಾಸಿ ಶೌಕತ್ ಯಾನೆ ಶೌಕತ್ ಅಲಿ (56) ಬಂಧಿತ ಆರೋಪಿ. ಈತ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅಳಿರಾ ಎಂಬಲ್ಲಿ ವಾಸವಿದ್ದ. ಪುತ್ತೂರು, ಉಪ್ಪಿನಂಗಡಿ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ 13 ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಈತನಿಂದ 18 ಲಕ್ಷ ರೂ. ಮೊತ್ತದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
2017ರ ಬಳಿಕ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಡೆದ ಹೆಚ್ಚಿನ ಮನೆಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಶೌಕತ್ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಆದರ್ಶನಗರ, 34 ನೆಕ್ಕಿಲಾಡಿ, ಕಲ್ಲೇರಿ, ಕೆಂಪಿಮಜಲು, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಅಜೇಯನಗರ, ಮುರ, ಬನ್ನೂರು, ಹಾರಾಡಿ, ಕೋಡಿಂಬಾಡಿ, ಜೈನರಗುರಿ, ಸಾಲ್ಮರ, ದಾರಂದಕುಕ್ಕು, ಬಂಟ್ವಾಳ ಠಾಣಾ ವ್ಯಾಪ್ತಿಯ ಕಲ್ಲಡ್ಕಗಳಲ್ಲಿ ನಡೆದ ಮನೆ ಕಳವು ಪ್ರಕರಣಗಳಲ್ಲಿ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶೌಕತ್ನಿಂದ ವಿವಿಧೆಡೆಯಿಂದ ಕಳ್ಳತನ ಮಾಡಿರುವ ಒಟ್ಟು 18 ಪವನ್ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಈತ ಮಾರಿದ ಚಿನ್ನವನ್ನು ಉಪ್ಪಿನಂಗಡಿಯ 2 ಹಾಗೂ ಬಂಟ್ವಾಳದ ಒಂದು ಜ್ಯುವೆಲ್ಲರಿಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳ್ಳನನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರ ಕಾರ್ಯ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.